ದುನಿಯಾ ವಿಜಿಗೆ ಪೊಲೀಸರಿಂದ ಬುದ್ಧಿ ವಾದ – ಗುರುವಾರವೂ ನಡೆಯಲಿದೆ ವಿಚಾರಣೆ

Public TV
2 Min Read

ಬೆಂಗಳೂರು: ಪುತ್ರಿಯ ಮೇಲಿನ ಹಲ್ಲೆ ಪ್ರಕರಣದ ವಿಚಾರಣೆಗೆ ಇಂದು ಪೊಲೀಸ್ ಠಾಣೆಗೆ ಹಾಜರಾಗಿದ್ದ ನಟ ದುನಿಯಾ ವಿಜಯ್ ಅವರಿಗೆ ಪೊಲೀಸರು ಬುದ್ಧಿವಾದ ಹೇಳಿದ್ದು, ಪದೇ ಪದೇ ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಿರುವುದಕ್ಕೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ತನ್ನ ಬಟ್ಟೆ ಮತ್ತು ದಾಖಲೆಗಳನ್ನು ತರಲು ತಂದೆ ವಿಜಯ್ ಮನೆಗೆ ಭೇಟಿ ನೀಡಿದ್ದ ಪುತ್ರಿ ಮೋನಿಕಾ ಮೇಲೆ ಹಲ್ಲೆ ನಡೆಸಿದ ದೂರಿಗೆ ಸಂಬಂಧಿಸಿದಂತೆ ಇಂದು ವಿಜಯ್ ಗಿರಿನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗಮಿಸಿದ್ದರು. ಸತತ ಮೂರು ಗಂಟೆಗಳ ಕಾಲ ಪೊಲೀಸರು ವಿಜಯ್ ವಿಚಾರಣೆ ನಡೆಸಿದರು. ಈ ವೇಳೆ ವಿಜಯ್ ಆಪ್ತರಾದ ಹೇಮಂತ್, ಮಹಮ್ಮದ್, ವಿನೋದ್ ಕೂಡ ಹಾಜರಿದ್ದರು.

ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ವಿಜಯ್, ಮಾಧ್ಯಮಗಳು ಸತ್ಯವನ್ನು ತೋರಿಸಿವೆ. ಆದ್ದರಿಂದ ನಿಮಗೆ ವಂದನೆ ತಿಳಿಸುತ್ತೇನೆ. ನಮ್ಮ ಮನೆಯಲ್ಲಿ ಇದ್ದ ಸಿಸಿಟಿವಿ ಡಿವಿಆರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಪುತ್ರಿ ಮೋನಿಕಾ ಮನೆ ಒಳಗಡೆ ಬಂದಿಲ್ಲ. ಮನೆಯಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಪೊಲೀಸರಿಗೆ ನೀಡಿರುವ ದೂರಿನ ಎಫ್‍ಐಆರ್ ನಲ್ಲಿ ತಲೆ ಜಜ್ಜಿದೆ, ಮಾರಕಾಸ್ತ್ರಗಳನ್ನ ಬಳಸಿದ್ದಾರೆ ಎಂದು ದಾಖಲಿಸಿದ್ದಾರೆ. ಈಗ ಲಭ್ಯವಾಗಿರುವ ವಿಡಿಯೋದಲ್ಲಿ ಏನೂ ಇಲ್ಲ. ಇದೆಲ್ಲಾ ಸುಳ್ಳು. ಇದರ ಹಿಂದೆ ಯಾರೋ ಇದ್ದಾರೆ ಎಂದು ನನಗೆ ಗೊತ್ತು. ನನ್ನ ಮೇಲೆ ಎಫ್.ಐ.ಆರ್ ಮೇಲೆ ಎಫ್.ಐ.ಆರ್ ದಾಖಲಿಸುತ್ತಿದ್ದಾರೆ. ಇನ್ನೂ ಮೂರು ದಿನದಲ್ಲಿ ದಾಖಲೆ ಸಮೇತ ಯಾರು ಎಂದು ಸಾಬೀತುಪಡಿಸುತ್ತೇನೆ ಎಂದು ತಿಳಿಸಿದರು.

ಉಳಿದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದುನಿಯಾ ವಿಜಯ್ ಅವರ ಮೊದಲ ಪುತ್ರಿ ಮೋನಿಕಾ ಕೂಡ ಸಂಜೆ ಆರು ಗಂಟೆ ನಂತರ ತಾಯಿ ನಾಗರತ್ನ ಮತ್ತು ವಕೀಲೆ ಮೀರಾ ರಾಘವನ್ ಅವರೊಂದಿಗೆ ವಿಚಾರಣೆ ಹಾಜರಾಗಿದ್ದರು. ಅರ್ಧ ಗಂಟೆ ಕಾಲ ವಿಚಾರಣೆ ನಡೆಸಿದ ಪೊಲೀಸರು ಸಮಯ ಮೀರಿದ ಕಾರಣ ನಾಳೆ 11 ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ವಿಚಾರಣೆ ಬಳಿಕ ಮಾತನಾಡಿದ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಪರ ವಕೀಲೆ ಮೀರಾ ರಾಘವನ್, ಸದ್ಯ ಕತ್ತಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಹಲ್ಲೆ ಆಗಿಲ್ಲ ಎಂಬಂತೆ ಹೇಳಿಕೆ ನೀಡುತ್ತಿದ್ದಾರೆ. ಆದರೆ ಮನೆಯ ಹೊರಗಡೆ ನಡೆದ ಘಟನೆಯ ದೃಶ್ಯಗಳನ್ನು ಮಾತ್ರ ಪೊಲೀಸರಿಗೆ ಸಲ್ಲಿಸಲಾಗಿದೆ. ಮನೆಯ ಒಳಗಡೆ ಗಲಾಟೆ ನಡೆದಿದ್ದು, ಈ ದೃಶ್ಯಗಳನ್ನು ಕೊಟ್ಟಿಲ್ಲ. ಮನೆಯ ಒಳಗಡೆಯ ಸಿಸಿಟಿವಿ ದೃಶ್ಯಗಳು ನೀಡಿದರೆ ಮಾತ್ರ ಸತ್ಯ ಗೊತ್ತಾಗತ್ತೆ ಎಂದು ತಿಳಿಸಿದರು. ವಿಜಯ್ ಹಾಗೂ ಪುತ್ರಿ ಮೋನಿಕಾ ಅವರ ವಿಚಾರಣೆ ಗುರುವಾರವೂ ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *