ಎಣ್ಣೆ ಮತ್ತಲ್ಲಿ ತಿರುಪತಿ ದೇವಸ್ಥಾನದ ಗೋಪುರ ಏರಿ ತಿರುಪತಿಯಿಂದ ಕಿರಿಕ್‌!

1 Min Read

– ಮದ್ಯ ನೀಡಿದರೆ ಮಾತ್ರ ಇಳಿಯುತ್ತೇನೆ ಎಂದ ಭೂಪ

ತಿರುಪತಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಿರುಪತಿ ತಿರುಮಲ ದೇವಸ್ಥಾನದ (Tirupati Temple) ಗೋಪುರ ಏರಿ ಕಿರಿಕ್‌ ಮಾಡಿದ ಘಟನೆ ತಡರಾತ್ರಿ ನಡೆದಿದೆ.

ಭಕ್ತರಂತೆ ದೇವಸ್ಥಾನವನ್ನು ಪ್ರವೇಶ ಮಾಡಿದ್ದ ಈತ ಟೆಂಟ್ ಕಂಬ್‌ಗಳನ್ನು ಹತ್ತಿ ನೇರವಾಗಿ ಗರ್ಭಗುಡಿಯ ಮೇಲಿರುವ ಗೋಪುರವನ್ನು (Gopura) ಏರಿದ್ದಾನೆ. ಗೋಪುರ ಮೇಲಿರುವ ಕಲಶಗಳಿರುವ ಜಾಗವನ್ನು ತಲುಪಿ ಮದ್ಯ (Alcohol) ಕೊಡುವಂತೆ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ.

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಪೆದ್ದಮಲ್ಲ ರೆಡ್ಡಿ ಕಾಲೋನಿಯ ಕುರ್ಮಾ ವಾಡಾದ ನಿವಾಸಿ ಕುಟ್ಟಡಿ ತಿರುಪತಿ(45) ಕಿರಿಕ್‌ ಮಾಡಿದ ವ್ಯಕ್ತಿಯಾಗಿದ್ದು ಕೊನೆಗೆ ಮನವೊಲಿಸಿ ಕೆಳಗೆ ಇಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಇದನ್ನೂ ಓದಿ: ದೇಶದ ಜಿಡಿಪಿಗಿಂತಲೂ ಹೆಚ್ಚು ಮೌಲ್ಯದ ಚಿನ್ನ ಹೊಂದಿದ್ದಾರೆ ಭಾರತೀಯರು!

 

3 ಗಂಟೆ ಹೈಡ್ರಾಮಾ
ತಿರುಪತಿ ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಸುಮಾರು 3 ಗಂಟೆಗಳ ಕಾಲ ವ್ಯಕ್ತಿಯನ್ನು ಗೋಪುರದಿಂದ ಕೆಳಗೆ ಇಳಿಯುವಂತೆ ಮನವೊಲಿಸಿದ್ದರು.

ಪೊಲೀಸ್ ಸಿಬ್ಬಂದಿ ಶಿಖರವನ್ನು ತಲುಪಿ ಆತನ ಜೊತೆ ಮಾತನಾಡುವಾಗ ತನಗೆ ಕ್ವಾರ್ಟರ್ ಬಾಟಲ್ ಮದ್ಯ ನೀಡಿದರೆ ಮಾತ್ರ ಕೆಳಗೆ ಬರುತ್ತೇನೆ ಎಂದು ಹೇಳಿದ್ದಾನೆ. ಪೊಲೀಸರು ಆತನಿಗೆ ನೀನು ಕೆಳಗೆ ಇಳಿದ ನಂತರ ಮದ್ಯ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ನಂತರ ಆತ ಕೆಳಗೆ ಇಳಿಯಲು ಒಪ್ಪಿಕೊಂಡಿದ್ದಾನೆ. ಕಬ್ಬಿಣದ ಏಣಿಗಳ ಸಹಾಯದಿಂದ ಸುರಕ್ಷಿತವಾಗಿ ಕೆಳಗೆ ಇಳಿಸಿದ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ವೈಎಸ್ಆರ್ ಕಾಂಗ್ರೆಸ್ ಕಿಡಿ
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡ ವೈಎಸ್ಆರ್ ಕಾಂಗ್ರೆಸ್ ರಾಜ್ಯದ ಚಂದ್ರಬಾಬು ನಾಯ್ಡು ಅವರ ಸಮ್ಮಿಶ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರದಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಸಿಟ್ಟು ಹೊರಹಾಕಿದೆ.

Share This Article