ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡಿದ 11,500 ಚಾಲಕರ ಚಾಲನಾ ಪರವಾನಗಿಯನ್ನು (Driving Licence) ಬೆಂಗಳೂರು ಸಂಚಾರಿ ಪೊಲೀಸರು (Traffic Police) ರದ್ದು ಮಾಡಿದ್ದಾರೆ.
ಕಳೆದ ವರ್ಷ ಕುಡಿದು ವಾಹನ ಚಾಲನೆ ಮಾಡಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ12,900 ಚಾಲಕರ ಡಿಎಲ್ (DL) ರದ್ದು ಮಾಡುವಂತೆ ಸಾರಿಗೆ ಇಲಾಖೆ (RTO) ಅಧಿಕಾರಿಗಳಿಗೆ ಸಂಚಾರಿ ಪೊಲೀಸರು ಪತ್ರ ಬರೆದಿದ್ದರು.
12,900 ಚಾಲಕರ ಪೈಕಿ 11,500 ಡಿಎಲ್‌ಗಳನ್ನು ಆರ್‌ಟಿಒ ಅಧಿಕಾರಿಗಳು ರದ್ದು ಮಾಡಿದ್ದಾರೆಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಪಾರ್ಟ್‌ಮೆಂಟ್ ಆವರಣದಲ್ಲಿ ಸೈಕಲ್ ಆಟವಾಡುತ್ತಿದ್ದಾಗ ಕಾರು ಡಿಕ್ಕಿ – ಬಾಲಕ ದುರ್ಮರಣ
ಪದೇ ಪದೇ ಡ್ರಿಂಕ್ ಅಂಡ್ ಡ್ರೈವ್ (Drink and Drive) ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಚಾಲಕರ ಡಿಎಲ್‌ಗಳನ್ನು ಪರಿಶೀಲಿಸಿ ಈಗ ರದ್ದು ಮಾಡಲಾಗಿದೆ. ಉಳಿದವುಗಳನ್ನ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವ ಬಗ್ಗೆ ಆರ್ ಟಿ ಒ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಇತ್ತೀಚಿಗೆ ಕುಡಿದು ಶಾಲಾ ವಾಹನ ಚಾಲನೆ ಮಾಡುವ ಬಗ್ಗೆ ದೂರುಗಳು ಬರುತ್ತಿತ್ತು. ಹಾಗಾಗಿ ಬೆಂಗಳೂರಿನಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ನಗರದ್ಯಂತ 5,110 ಶಾಲಾ ವಾಹನಗಳ ತಪಾಸಣೆ ಮಾಡಲಾಗಿದೆ. ಈ ಪೈಕಿ ಸುಮಾರು 26 ಶಾಲಾ ಬಸ್ ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಪತ್ತೆಯಾಗಿದೆ.
ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಚಾಲಕರ ಡಿಎಲ್ ರದ್ದುಗೊಳಿಸಲು ಆರ್‌ಟಿಒಗೆ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ.ಕುಡಿದು ವಾಹನ ಚಾಲನೆ ಮಾಡ್ತಿದ್ದವರ ವಿರುದ್ದ ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದೆ. ಶಾಲಾ ಆಡಳಿತ ಮಂಡಳಿಯವರ ನಿರ್ಲಕ್ಷ್ಯ ಕಂಡು ಬಂದಲ್ಲಿ, ಶಿಕ್ಷಣ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದು ಸಂಚಾರ ಜಂಟಿ ಪೊಲೀಸ್ ಆಯುಕ್ತ ಕಾರ್ತೀಕ್ ರೆಡ್ಡಿ ತಿಳಿಸಿದ್ದಾರೆ.


