ವೀಕೆಂಡ್‍ನಲ್ಲಿ ಪೊಲೀಸ್ರಿಂದ ಶಾಕ್ – ಒಂದೇ ದಿನ 100 ಡ್ರಿಂಕ್ & ಡ್ರೈವ್ ಕೇಸ್ ದಾಖಲು

Public TV
1 Min Read

– ಹಾಸನದಲ್ಲೇ ವರ್ಷಕ್ಕೆ 420 ಜನ ಅಪಘಾತದಲ್ಲಿ ಸಾವು

ಹಾಸನ: ವೀಕೆಂಡ್‍ನಲ್ಲಿ ಕುಡಿದು ವಾಹನ ಚಲಾಯಿಸುವವರಿಗೆ ಹಾಸನ ಪೊಲೀಸರು ಭರ್ಜರಿ ಶಾಕ್ ನೀಡಿದ್ದಾರೆ. ಶನಿವಾರ ಒಂದೇ ದಿನ ಸುಮಾರು 100 ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಹಾಸನ ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಾಗಿದ್ದು, ಇದರಿಂದ ಕುಡಿದು ವಾಹನ ಚಲಾಯಿಸುತ್ತಿದ್ದವರು ಈಗ ಹೆದರುವಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಹಾಸನ ಜಿಲ್ಲೆಯೊಂದರಲ್ಲೇ ಅಪಘಾತದಿಂದಾಗಿ ವರ್ಷಕ್ಕೆ ಸರಾಸರಿ 420 ಜನ ಮೃತಪಟ್ಟಿದ್ದಾರೆ. ಇದು ಒಂದು ಜಿಲ್ಲೆಯ ಮಟ್ಟಿಗೆ ನೋಡುವುದಾದರೆ ದೊಡ್ಡ ಸಾವಿನ ಸಂಖ್ಯೆಯಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ನೂತನ ಎಸ್‍ಪಿಯಾಗಿ ಶ್ರೀನಿವಾಸ್‍ಗೌಡ ಅಧಿಕಾರ ವಹಿಸಿಕೊಂಡ ದಿನದಿಂದ ಅಪಘಾತದಿಂದ ಉಂಟಾಗುತ್ತಿರುವ ಸಾವು-ನೋವಿನ ಪ್ರಮಾಣ ತಗ್ಗಿಸಲು ಪಣ ತೊಟ್ಟಿದ್ದಾರೆ. ಆದ್ದರಿಂದ ಅಪಘಾತಕ್ಕೆ ಕಾರಣವಾಗುತ್ತಿರುವ ಅಂಶಗಳನ್ನು ಪಟ್ಟಿ ಮಾಡಿ, ಅವುಗಳನ್ನು ಸರಿ ಪಡಿಸಲು ಹಗಲು ರಾತ್ರಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗಿಳಿದಿದ್ದಾರೆ.

ಅಪಘಾತದಲ್ಲಿ ಸಾವು ನೋವು ಹೆಚ್ಚಾಗುತ್ತಿರುವುದಕ್ಕೆ ಕುಡಿದು ವಾಹನ ಚಲಾಯಿಸುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಹೀಗಾಗಿ ಹಾಸನ ಜಿಲ್ಲಾ ಪೊಲೀಸರು ಜಿಲ್ಲೆಯಾದ್ಯಂತ ಕುಡಿದು ವಾಹನ ಚಲಾಯಿಸುತ್ತಿರುವವರನ್ನು ಹಿಡಿದು ಕೇಸ್ ಹಾಕುತ್ತಿದ್ದಾರೆ.

ಕುಡಿದು ವಾಹನ ಚಲಾಯಿಸುವವರನ್ನು ಹಿಡಿದಾಗ ಕೆಲವರು ತಮ್ಮ ಪ್ರಭಾವ ಬಳಸಲು ಮುಂದಾಗುತ್ತಾರೆ. ಕೆಲವೊಮ್ಮೆ ಬೇರೆಯವರಿಂದಲೂ ಕರೆ ಮಾಡಿಸುತ್ತಾರೆ. ಆದರೆ ನಾವು ಒಂದು ಒಳ್ಳೆಯ ಕೆಲಸಕ್ಕಾಗಿ ಕುಡಿದು ವಾಹನ ಚಲಾಯಿಸದಂತೆ ಮನವಿ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಯಾರೂ ಕೂಡ ತಮ್ಮ ಪ್ರಭಾವ ಬಳಸುವುದು ಸರಿಯಲ್ಲ ಎಂದು ಎಸ್‍ಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ. ಇತ್ತ ಸಾರ್ವಜನಿಕರು ಕೂಡ ಪೊಲೀಸರ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *