ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

Public TV
2 Min Read

– ಮಾದಕ ವಸ್ತುವಿಗಾಗಿ ಜೈಲಲ್ಲಿ ಪರದಾಟ, ಮೌನಕ್ಕೆ ಶರಣಾದ ಹಂತಕರು

ಲಕ್ನೋ: ಪತಿಯನ್ನು (Husband)  ಕೊಂದು ಜೈಲುಪಾಲಾಗಿರುವ ಮುಸ್ಕಾನ್ ರಸ್ತೋಗಿ ಮತ್ತು ಅವಳ ಪ್ರೇಮಿ ಸಾಹಿಲ್ ಶುಕ್ಲಾ ಜೈಲಿನಲ್ಲಿ ಒಟ್ಟಿಗೆ ಇರಲು ಬಯಸಿದ್ದರು. ಆದರೆ ಜೈಲು ಕೈಪಿಡಿಯ ಪ್ರಕಾರ ಅದು ಸಾಧ್ಯವಿಲ್ಲದ ಕಾರಣ ಇಬ್ಬರನ್ನೂ ಬೇರೆ ಬೇರೆ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ಮೀರತ್‌ನ (Meerut) ಚೌಧರಿ ಚರಣ್ ಸಿಂಗ್ ಜೈಲಿನ ಹಿರಿಯ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಬ್ಬರು ಮಾದಕ ವ್ಯಸನಿಗಳೆಂದು ತಿಳಿದುಬಂದಿದೆ. ಇಬ್ಬರೂ ಮಾದಕ ವಸ್ತುವಿಗಾಗಿ ಜೈಲಲ್ಲಿ ಹಂಬಲಿಸುತ್ತಿದ್ದಾರೆ. ಇಬ್ಬರೂ ಸಹ ಕೈದಿಗಳ ಜೊತೆ ಮಾತನಾಡದೇ ಸೆಲ್‌ನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಜೈಲಿನಲ್ಲಿರುವ ವ್ಯಸನ ಮುಕ್ತ ಕೇಂದ್ರದಲ್ಲಿ ಇಬ್ಬರಿಗೂ ಕೌನ್ಸೆಲಿಂಗ್ ನೀಡಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೈಲು ಸಿಬ್ಬಂದಿಗೆ ಅವರ ಮೇಲೆ ನಿಗಾ ಇಡಲು ತಿಳಿಸಲಾಗಿದೆ. ಮುಸ್ಕಾನ್ ಜೈಲಿಗೆ ಬಂದ ಮೊದಲ ದಿನ ಏನನ್ನೂ ತಿನ್ನಲಿಲ್ಲ. ಈಗ ಊಟ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಗಳ ಕುಟುಂಬದವರು ಯಾರೂ ಅವರನ್ನು ಭೇಟಿ ಮಾಡಲು ಇನ್ನೂ ಬಂದಿಲ್ಲ. ಮುಸ್ಕಾನ್ ಅವರ ಕುಟುಂಬ ಆಕೆಯ ಪರವಾಗಿ ವಕೀಲರನ್ನು ನೇಮಿಸುವುದಿಲ್ಲ ಎಂದು ಜೈಲು ಅಧಿಕಾರಿಗಳಿಗೆ ತಿಳಿಸಿದ್ದರು. ಪ್ರಕರಣವನ್ನು ವಾದಿಸಲು ಸರ್ಕಾರಿ ವಕೀಲರನ್ನು ನೇಮಿಸಬೇಕು ಎಂದು ವಿನಂತಿಸಿದ್ದರು ಎನ್ನಲಾಗಿದೆ.

ಕಳೆದ ವಾರ ಬಂಧನಕ್ಕೊಳಗಾದ ನಂತರ ಇಬ್ಬರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆಯ ಭಾಗವಾಗಿ ವಿವರವಾದ ವಿಚಾರಣೆಗಾಗಿ ಅವರ ಕಸ್ಟಡಿಗೆ ಕೋರುವುದಾಗಿ ಮೀರತ್ ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಕಳೆದ ವಾರ ಮುಸ್ಕಾನ್ ಮತ್ತು ಸಾಹಿಲ್‌ನನ್ನು ಬಂಧಿಸಲಾಗಿತ್ತು. ಸೌರಭ್ ಕಳೆದ ತಿಂಗಳು ಮನೆಗೆ ಬಂದಿದ್ದರು. ಮಾ.4 ರಂದು ಸೌರಭ್‌ಗೆ ಮಾದಕ ವಸ್ತು ನೀಡಿ ನಂತರ ಇರಿದು ಕೊಲ್ಲಲಾಗಿತ್ತು. ನಂತರ ಅವಳು ಮತ್ತು ಸಾಹಿಲ್ ಮೃತದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಸೀಲ್‌ ಮಾಡಿದ್ದರು. ನಂತರ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು.

ಸೌರಭ್ ಮತ್ತು ಮುಸ್ಕಾನ್ 2016 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಆರು ವರ್ಷದ ಮಗಳಿದ್ದಾಳು. ಸೌರಭ್ ಕುಟುಂಬದೊಂದಿಗೆ ಮುಸ್ಕಾನ್‌ನ ಸಂಬಂಧ ಹಾಳಾಗಿತ್ತು. ಇದರಿಂದ ದಂಪತಿಗಳು ಬಾಡಿಗೆ ಮನೆ ಮಾಡಿಕೊಂಡಿದ್ದರು. 2019ರಲ್ಲಿ ಸೌರಭ್ ತನ್ನ ಹೆಂಡತಿಗೆ ಸಾಹಿಲ್ ಜೊತೆಗಿನ ಸಂಬಂಧದ ಬಗ್ಗೆ ತಿಳಿದಿತ್ತು. ಬಳಿಕ ವಿಚ್ಛೇದನಕ್ಕೆ ಯೋಚಿಸಿದ್ದರು. ಆದರೆ ಮಗಳ ಭವಿಷ್ಯದ ಬಗ್ಗೆ ಯೋಚಿಸಿ ಹಿಂದೆ ಸರಿದಿದ್ದರು. ಬಳಿಕ ಲಂಡನ್‌ಗೆ ತೆರಳಿ ಕೆಲಸ ಮಾಡುತ್ತಿದ್ದರು. ಸೌರಭ್‌ ಕುಟುಂಬಸ್ಥರು ಹಣಕ್ಕಾಗಿ ಮುಸ್ಕಾನ್‌ ಅವರನ್ನು ಮದುವೆಯಾಗಿದ್ದಳು ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Share This Article