2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ: ಖ್ಯಾತ ನಿರ್ಮಾಪಕ ಜಾಫರ್ ಬಂಧನ

Public TV
1 Min Read

ಮಾದಕವಸ್ತುಗಳ (Drugs) ಕಳ್ಳ ಸಾಗಾಣಿಕೆ ಸಂಬಂಧಿಸಿದಂತೆ ತಮಿಳಿನ ಖ್ಯಾತ ನಿರ್ಮಾಪಕ (Producer) ಹಾಗೂ ರಾಜಕಾರಣಿ ಜಾಫರ್ ಸಾದಿಖ್‌ನನ್ನು ಬಂಧಿಸಲು (Arrest) ತಂಡವನ್ನೇ ರಚನೆ ಮಾಡಿತ್ತು ಎನ್‌ಸಿಬಿ. ಸತತ ಹುಡುಕಾಟದ ನಂತರ ಕೊನೆಗೂ ಜಾಫರ್ ಎನ್‌ಸಿಬಿ ಬೀಸಿದ ಬಲೆಗೆ ಬಿದ್ದಿದ್ದಾನೆ. ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾದಕವಸ್ತು ಕಳ್ಳಸಾಗಣೆಯ ಆರೋಪ ಈತನ ಮೇಲಿದೆ.

ಜಾಫರ್ ಸಾದಿಖ್ (Zafar Sadikh) ಬಂಧನದ ನಂತರ ಈತನೊಬ್ಬ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾದ ಮಾಸ್ಟರ್ ಮೈಂಡ್ ಆಗಿದ್ದಾನೆ ಎಂದು ಎನ್.ಸಿ.ಬಿ ಆರೋಪ ಮಾಡಿದೆ. ಬಂಧಿತ ಜಾಫರ್ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾನೆ. ಜೊತೆಗೆ ಡಿಎಂಕೆ ಪಕ್ಷದ ಸದಸ್ಯನಾಗಿಯೂ ಗುರುತಿಸಿಕೊಂಡಿದ್ದ. ಈತನ ಮೇಲೆ ಡ್ರಗ್ಸ್‌ ಆರೋಪ ಕೇಳಿ ಬರುತ್ತಿದ್ದಂತೆಯೇ ಪಕ್ಷ ಈತನನ್ನು ಉಚ್ಚಾಟನೆ ಮಾಡಿತ್ತು.

ಎನ್.ಸಿ.ಬಿ ಆರೋಪಿಸಿದಂತೆ ಈತ ಅಪಾಯಕಾರಿ ಡ್ರಗ್ಸ್‌ಗಳನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸುತ್ತಿದ್ದನಂತೆ. ನಿಷೇಧಿತ ಸ್ಯೂಡೋಫೆಡ್ರಿನ್ ರೀತಿಯ ಅಪಾಯಕಾರಿ ಡ್ರಗ್ಸ್ ಅನ್ನು ಆಸ್ಟ್ರೇಲಿಯಾಗೆ ಕಳುಹಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಡ್ರೈ ಪ್ರೂಟ್ಸ್ ಪ್ಯಾಕೆಟ್, ಒಣಗಿದ ತೆಂಗಿನ ಕಾಯಿ ಹೀಗೆ ಹಲವು ವಸ್ತುಗಳ ಮೂಲಕ ಡ್ರಗ್ಸ್ ಸಾಗಾಣಿಕೆ ಮಾಡುತ್ತಿದ್ದ ಎನ್ನುವುದು ಅಧಿಕಾರಿಗಳ ಆರೋಪ.

 

ಕೆಲ ದಿನಗಳ ಹಿಂದೆಯಷ್ಟೇ ಚೆನ್ನೈನ ಡಂಪ್ ಯಾರ್ಡ್ ನಲ್ಲಿ ಶೇಖರಿಸಿಟ್ಟಿದ್ದ ಮಾದಕ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು. ಈ ವಸ್ತುಗಳಿಗೂ ಜಾಫರ್‌ಗೂ ಸಂಬಂಧವಿದೆ ಎನ್ನುವ ಕಾರಣಕ್ಕಾಗಿ ಹುಡುಕಾಟ ನಡೆಸಿದ್ದರು. ಎರಡು ವಾರಗಳ ಹುಡುಕಾಟದ ನಂತರ ಜಾಫರ್‌ನನ್ನು ಬಂಧಿಸಲಾಗಿದೆ.

Share This Article