ಭೀಕರ ಬರಗಾಲಕ್ಕೆ ಜನ, ಜಾನುವಾರು ಕಂಗಾಲು- ದಿನ ಕಳೆದಂತೆ ಹೆಚ್ಚಾಗ್ತಿದೆ ನೀರಿಗಾಗಿ ಹಾಹಾಕಾರ

Public TV
1 Min Read

ಕೊಪ್ಪಳ: ರಾಜ್ಯದ ಉತ್ತರ ಭಾಗದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಬರ ತಾಂಡವವಾಡುತ್ತಿದೆ. ಅಲ್ಲದೆ ನೀರಿಲ್ಲದೆ ಬರ ಒಂದು ಕಡೆಯಾದರೆ ಇನ್ನೊಂದೆಡೆ ಮೇವು ಇಲ್ಲದೆ ಜಾನುವಾರುಗಳೂ ಪರಿತಪಿಸುತ್ತಿವೆ.

ಕುಷ್ಟಗಿ, ಯಲಬುರ್ಗಾ, ಕನಕಗಿರಿ ಮತ್ತು ಕೊಪ್ಪಳ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿದ್ದರೂ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಸಾಕಷ್ಟು ಕಡೆ ಬೋರ್ ವೇಲ್ ಕೊರೆಸಿದ್ದಾರೆ. ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ನಡೆಯುತ್ತಿದೆ. ಆದರೂ ಕೂಡ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

ಈಗಾಗಲೇ ತುಂಗಭದ್ರಾ ಡ್ಯಾಂನಲ್ಲಿ ನೀರು ಇಲ್ಲದೆ ಬಣ ಗುಟ್ಟುತ್ತಿದೆ. ಮಳೆಗಾಲದಲ್ಲಿ ಡ್ಯಾಂ ತುಂಬಿ, 100 ಟಿಎಂಸಿ ನೀರು ಡ್ಯಾಂನಲ್ಲಿ ಸಂಗ್ರಹವಾಗಿತ್ತು. ಹೆಚ್ಚಿಗೆ ನೀರು ಹರಿದು ಬಂದಿದ್ದರಿಂದ 50 ಟಿಎಂಸಿಗೂ ಹೆಚ್ಚು ನೀರನ್ನು ನದಿಗಳ ಮೂಲಕ ಹೊರಗೆ ಹರಿಬಿಡಲಾಗಿತ್ತು. ಆದರೆ ಆಗ ನೀರನ್ನು ಸಂಗ್ರಹಿಸಲು ಪರ್ಯಾಯ ವ್ಯವಸ್ಥೆ ಮಾಡಿದ್ದರೆ, ಇಂದು ನೀರಿನ ಸಮಸ್ಯೆ ಬರುತ್ತಿಲ್ಲ. ಇವತ್ತು ಡ್ಯಾಂನಲ್ಲಿ ಕೇವಲ 3 ಟಿಎಂಸಿ ನೀರು ಇದೆ. ಇದು ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಮೀಸಲಿಡಲಾಗಿದ್ದು, ಇನ್ನೂ ಒಂದು ಟಿಎಂಸಿ ನೀರು ಡೆಡ್ ಸ್ಟೋರೇಜ್‍ಗೆ ಬಿಡಬೇಕಾಗಿದೆ.

ಇಂದು ನೀರು ಸಿಗದೆ ಬೇರೆ ಬೇರೆ ಊರುಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ. ನೀರಿಲ್ಲದೆ ಜಾನುವಾರುಗಳಿಗೆ ಮೇವು ಸಹ ಸಿಗುತ್ತಿಲ್ಲ. ಹೀಗಾಗಿ ಗುಡ್ಡ ಕಾಡು ಎನ್ನದೆ ಜಾನುವಾರುಗಳನ್ನು ರಕ್ಷಣೆ ಮಾಡಲು ರೈತರು ಮುಂದಾಗುತ್ತಿದ್ದಾರೆ. ರೈತರು ನಮ್ಮ ಸಮಸ್ಯೆ ಯಾರಿಗೆ ಹೇಳೋಣ ಎಂದು ಚಡಪಡಿಸುತ್ತಿದ್ದಾರೆ. ಅಲ್ಲದೆ ನಮ್ಮ ಸಮಸ್ಯೆಯನ್ನ ಜನಪ್ರತಿನಿಧಿಗಳೊಂದಿಗೆ ಹೇಳಿಕೊಂಡರೆ ಅವರು ಕಾರೇ ಎನ್ನುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *