ಟೊಮೆಟೊ ಬೆಲೆ ಭಾರೀ ಕುಸಿತ – ಬೆಳೆಗಾರರಿಗೆ ಎದುರಾಗಿದೆ ಸಂಕಷ್ಟ

Public TV
2 Min Read

– 1 ರೂ. ಗಿಂತಲೂ ಕಡಿಮೆ ಬೆಲೆಗೆ 1 ಕೆಜಿ ಟೊಮೆಟೊ ಬಿಕರಿ
– ಲಕ್ಷ ಲಕ್ಷ ಖರ್ಚು ಮಾಡಿ ಟೊಮೆಟೊ ಬೆಳೆದ ರೈತರಿಗೆ ಸಂಕಷ್ಟ
– 15 ಕೆಜಿ ಯ ಟೊಮೆಟೊ ಬಾಕ್ಸ್ 10, 20, 30 ರೂ.ಗೆ ಬಿಕರಿ

ಚಿಕ್ಕಬಳ್ಳಾಪುರ: ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು ಜನಸಾಮಾನ್ಯರು ಹೈರಾಣಾಗುವಂತಾಗಿದೆ. ಮತ್ತೊಂದೆಡೆ ಲಕ್ಷ ಲಕ್ಷ ಖರ್ಚು ಮಾಡಿ ರೈತರು ಬೆಳೆದ ಬೆಳೆಗಳ ಬೆಲೆ ಪಾತಾಳಕ್ಕಿಳಿಯುವಂತಾಗಿದೆ.

ಲಕ್ಷ ಲಕ್ಷ ಖರ್ಚು ಮಾಡಿ ರೈತ ಬೆಳೆದ ಟೊಮೆಟೊ ಬೆಲೆ ಈಗ ಪಾತಾಳಕ್ಕಿಳಿದಿದ್ದು, ಅನ್ನದಾತ ಅಕ್ಷರಶಃ ನಲುಗಿ ಹೋಗುವಂತಾಗಿದೆ. ಒಂದು ಕೆಜಿ ಟೊಮೆಟೊ 1 ರೂ.ಗೂ ಕಡಿಮೆ ದರಕ್ಕೆ ಬಿಕರಿಯಾಗುತ್ತಿದ್ದು, ರೈತ ಸಾಲದ ಶೂಲಕ್ಕೆ ಸಿಲುಕುವಂತಾಗಿ ದಿಕ್ಕು ತೋಚದಂತಾಗಿದ್ದಾನೆ. ಇದನ್ನೂ ಓದಿ: ಮಲ್ಲೇಶ್ವರಂ 18ನೇ ಅಡ್ಡರಸ್ತೆ ಮೈದಾನದಲ್ಲಿ ವಾಕಿಂಗ್ ಪಥ ನಿರ್ಮಾಣ ಇಲ್ಲ: ಅಶ್ವತ್ಥನಾರಾಯಣ

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಟೊಮೆಟೊ ಮಾರುಕಟ್ಟೆಗೆ ರೈತರೇನೋ ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಬಂಪರ್ ಟೊಮೆಟೊ ಬೆಳೆದು ಲೋಡ್ ಗಟ್ಟಲೇ ಸಾವಿರಾರು ಟನ್ ಟೊಮೆಟೊವನ್ನು ಮಾರುಕಟ್ಟೆಗೆ ಹೊತ್ತು ತರುತ್ತಾರೆ. ಆದರೆ ಈಗ ಚಿಂತಾಮಣಿ ಟೊಮೆಟೊ ಮಾರುಕಟ್ಟೆಯಲ್ಲಿ ಟೊಮೆಟೊ ಖರೀದಿಸುವವರೇ ಕಡಿಮೆಯಾಗಿದ್ದಾರೆ.

ಟೊಮೆಟೊ ಖರೀದಿ ಮಾಡಿದರೂ 15 ಕೆಜಿಯ ಬಾಕ್ಸ್ 10 ರೂಪಾಯಿ, 20 ರೂಪಾಯಿ, ಹೆಚ್ಚೆಂದರೆ 30 ರೂಪಾಯಿಗೆ ಬಿಕರಿಯಾಗುತ್ತಿದೆ. ಇದರಿಂದ 1 ಕೆಜಿ ಟೊಮೆಟೊ 1 ರೂ. ಗಿಂತಲೂ ಕಡಿಮೆ ಬೆಲೆಗೆ ಬಿಕರಿಯಾಗುತ್ತಿದ್ದು, ಟೊಮೆಟೊ ಬೆಳೆದ ರೈತರು ಬೀದಿಪಾಲಾಗುವಂತಾಗಿದೆ ಎಂದು ಟೊಮೆಟೊ ಬೆಳೆಗಾರ, ರೈತ ತಿಪ್ಪಣ್ಣ ತಮ್ಮ ಅಳಲು ತೋಡಿಕೊಂಡಿದ್ದಾರೆ.

1 ಎಕೆರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯಲು ಸರಿಸುಮಾರು 2 ಲಕ್ಷ ರೂ. ಖರ್ಚಾಗುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ ಟೊಮೆಟೊ ರೇಟ್ ನೋಡಿದರೆ ಅಸಲು ಅಲ್ಲ, ಕನಿಷ್ಠ ಟೊಮೆಟೊ ಕೀಳಲು ಕೂಲಿಯಾಳುಗಳಿಗೆ ಕೂಲಿ ಹಾಗೂ ಟ್ರಾನ್ಸ್ ಪೋರ್ಟ್ ವೆಚ್ಚ ಕೂಡಾ ವಾಪಾಸ್ ಬರುವುದಿಲ್ಲ. ಈ ಸಂದರ್ಭದಲ್ಲಿ ಏನು ಮಾಡುವುದು ಎಂದು ರೈತ ಮಂಜುನಾಥ್ ರೆಡ್ಡಿ ಆಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಖಾಕಿ ಶರ್ಟ್ ಧರಿಸಿ ಸ್ಟೇರಿಂಗ್ ಹಿಡಿದು ರಸ್ತೆಯಲ್ಲಿ ಸಂಚಾರ – ನೋವಿನ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ

ಕಳೆದ 3 ತಿಂಗಳ ಹಿಂದೆ 15 ಕೆಜಿ ಟೊಮೆಟೊ ಬಾಕ್ಸ್ 2 ರಿಂದ 3 ಸಾವಿರ ರೂ.ಗೆ ಬಿಕರಿಯಾಗುತ್ತಿತ್ತು. ಹೀಗಾಗಿ ರೈತರು ಈ ಬಾರಿ ಹೆಚ್ಚಾಗಿ ಟೊಮೆಟೊ ಬೆಳೆದಿದ್ದಾರೆ. ಇನ್ನೂ ಟೊಮೆಟೊ ಆಮದು ಮಾಡಿಕೊಳ್ಳುವ ರಾಜ್ಯಗಳಲ್ಲೂ ಈ ಬಾರಿ ಟೊಮೆಟೊ ಬೆಳೆ ಬಂಪರ್ ಇಳುವರಿ ಬಂದಿದ್ದು, ಆಮದು ಕುಂಠಿತವಾಗಿ ಬೆಲೆ ಕುಸಿತ ಕಂಡಿದೆ.

Share This Article
Leave a Comment

Leave a Reply

Your email address will not be published. Required fields are marked *