ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಗಲ್ ಸ್ಟೋರ್ (Bangle Store) ಹಾಗೂ ಬೇಕರಿಗೆ ಲಾರಿ ನುಗ್ಗಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ತುಮಕೂರು (Tumakuru) ಜಿಲ್ಲೆ ಕೊರಟಗೆರೆ (Koratagere) ತಾಲೂಕಿನ ಕೋಳಾಲ ಸರ್ಕಲ್‌ನಲ್ಲಿ ನಡೆದಿದೆ.
ಕಾಟೇನಹಳ್ಳಿ ಗ್ರಾಮದ ರಂಗಧಾಮಯ್ಯ (65), ಪುರದಹಳ್ಳಿ ಗ್ರಾಮದ ಭೈಲಪ್ಪ (65), ಕೋಳಾಲದ ಮಂಜುನಾಥ್ (44) ಮೃತರು. ತುಮಕೂರು ಕಡೆಯಿಂದ ಗೊಬ್ಬರ ತುಂಬಿದ ಲಾರಿ ಹಾರೋಡಿ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಲಾರಿ ಇನ್‌ಶೂರೆನ್ಸ್ ಹಾಗೂ ಫಿಟ್‌ನೆಸ್ ಲ್ಯಾಪ್ಸ್ ಹಿನ್ನೆಲೆ ಕೋಳಾಲ ಪೊಲೀಸರು ಲಾರಿಯನ್ನ ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.