ಜೈಪುರ: ಸಹಾಯಕನಿಗೆ ಬಸ್ ಚಾಲನೆ ಮಾಡುವುದಕ್ಕೆ ಕೊಟ್ಟು ಸ್ವಲ್ಪ ಹೊತ್ತಲ್ಲೇ ಚಾಲಕ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಇಂದೋರ್‌ನಿಂದ ರಾಜಸ್ಥಾನ ಕಡೆಗೆ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಅನಾರೋಗ್ಯ ಅನಿಸಿದೆ. ತಕ್ಷಣ ಬಸ್ ಓಡಿಸುವಂತೆ ಸಹ ಚಾಲಕನಿಗೆ ನೀಡಿದ್ದಾರೆ. ಚಾಲಕ ಸತೀಶ್ ರಾವ್ ಮೃತಪಟ್ಟಿದ್ದಾರೆ.
ಬಸ್ ಚಲಾಯಿಸುತ್ತಿದ್ದಾಗ ರಾವ್‌ಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆಸ್ಪತ್ರೆ ತಲುಪುವ ಮೊದಲೇ ಚಲಿಸುತ್ತಿದ್ದ ಬಸ್ಸಿನಲ್ಲೇ ಮೂರ್ಛೆ ಹೋಗಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಪಾಲಿಯಿಂದ ವರದಿಯಾದ ಈ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದೆ.
ಸತೀಶ್ ರಾವ್ ಇಂದೋರ್‌ನಿಂದ ಜೋಧ್‌ಪುರಕ್ಕೆ ಖಾಸಗಿ ಬಸ್ ಚಲಾಯಿಸುತ್ತಿದ್ದರು. ಮಾರ್ಗಮಧ್ಯೆ ಅವರಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆಗ ಬಸ್ ಅನ್ನು ಸಹಾಯಕನಿಗೆ ಚಲಾಯಿಸುವಂತೆ ನೀಡುತ್ತಾರೆ. ಕೆಲಹೊತ್ತಲ್ಲೇ ಚಾಲಕ ರಾವ್ ಕುಸಿದು ಬೀಳುತ್ತಾರೆ. ಅವರನ್ನು ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಆದರೆ, ಅಷ್ಟರಲ್ಲಾಗಲೇ ಚಾಲಕ ಮೃತಪಟ್ಟಿದ್ದಾರೆ.
ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ವಿಷಯ ತಿಳಿದ ನಂತರ, ಮರಣೋತ್ತರ ಪರೀಕ್ಷೆಗೆ ಕುಟುಂಬದವರು ನಿರಾಕರಿಸಿದ್ದಾರೆ.