– ದುರ್ಘಟನೆಯಲ್ಲಿ ಮೂವರು ಸಾವು, 12 ಮಂದಿಗೆ ಗಾಯ
ವಿಜಯಪುರ: ಲಾರಿ ಹಾಗೂ ಕೆಎಸ್ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರು ಚಾಲಕರು ಸೇರಿ ಮೂವರು ಮೃತಪಟ್ಟ ಘಟನೆ ಮಹಿಳಾ ವಿಶ್ವವಿದ್ಯಾಲಯದ ಬಳಿ ನಡೆದಿದೆ.
ಆಂಧ್ರಪ್ರದೇಶ ನಿವಾಸಿ ಲಾರಿ ಡ್ರೈವರ್ ಮಾದಪ್ಪ ಹಾಗೂ ತಿಕೋಟಾ ನಿವಾಸಿ ಬಾಲಾಸಾಹೇಬ್ ಕರಿ ಮೃತರು. ಆದರೆ ಬಸ್ ಚಾಲಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಘಟನೆಯಲ್ಲಿ 12 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಡಿಕ್ಕಿಯ ರಭಸಕ್ಕೆ ಬಸ್ ಹಾಗೂ ಲಾರಿ ಮುಂಭಾಗ ಜಖಂಗೊಂಡಿದ್ದು, ಎರಡೂ ವಾಹನಗಳ ಚಾಲಕರ ಮೃತ ದೇಹಗಳು ಛಿದ್ರ ಛಿದ್ರವಾಗಿದೆ. ಜೊತೆಗೆ ಲಾರಿಯಲ್ಲಿದ್ದ ಬಾಲಾಸಾಹೇಬ್ ಕೂಡ ಮೃತಪಟ್ಟಿದ್ದಾರೆ. ಘಟನೆಯಿಂದಾಗಿ ವಿಜಯಪುರ-ಅಥಣಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ಕಿಲೋ ಮೀಟರ್ ಗಟ್ಟಲೆ ವಾಹನಗಳು ರಸ್ತೆ ಮೇಲೆ ಸಾಲುಗಟ್ಟಿ ನಿಂತಿವೆ.
ಈ ಕುರಿತು ಮಾತಿಹಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಬಳಿಕ ವಾಹನ ಸಂಚಾರ ಮುಕ್ತ ಮಾಡಲು ಪೊಲೀಸರು ಹರಸಾಹಸ ಪಡುವಂತಾಯಿತು. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.