ಬೇಸಿಗೆಗೂ ಮುನ್ನವೇ ಕುಡಿಯೋ ನೀರಿಗೆ ಹಾಹಾಕಾರ – ವಾಟರ್‌ ಟ್ಯಾಂಕರ್‌ ಮಾಲೀಕರಿಂದ ದುಪ್ಪಟ್ಟು ದರ ಸುಲಿಗೆ!

Public TV
1 Min Read

– ಪಬ್ಲಿಕ್ ಟಿವಿಯಲ್ಲಿ ಬಿಗ್ ಎಕ್ಸ್‌ಪೋಸ್‌

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಕುಡಿಯುವ ನೀರು (Drinking Water) ಬೇಕಾದ್ರೇ ಜೇಬು ತುಂಬಾ ಕಾಸಿರಬೇಕು ಅನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಬೇಸಿಗೆ ಸಮೀಪಿಸುತ್ತಿದ್ದು, ಕಾವೇರಿ ಬರಿದಾಗುತ್ತಿದೆ. ಇದರಿಂದ ಬೆಂಗಳೂರಿನಲ್ಲಿ (Bengaluru) ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಹೀಗಾಗಿ ಜನ ಅನಿವಾರ್ಯವಾಗಿ ಖಾಸಗಿ ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.

ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾದ ಬೆನ್ನಲ್ಲೇ ಟ್ಯಾಂಕರ್ ನೀರಿಗೆ (Tanker Water) ಬೇಡಿಕೆ ಹೆಚ್ಚಾಗಿದೆ. ಎಷ್ಟರಮಟ್ಟಿಗೆ ಅಂದ್ರೆ ಎರಡು, ಮೂರು ಪಟ್ಟು ಹೆಚ್ಚು ದರ ಕೇಳಿದ್ರೂ, ನೀರನ್ನು ಖರೀದಿಸಬೇಕಾಗಿದೆ. ಪ್ರಶ್ನೆ ಮಾಡಿದ್ರೆ ಬೇಕಾದ್ರೆ ತೆಗೆದುಕೊಳ್ಳಿ, ಇಲ್ಲವಾದ್ರೆ ಬಿಡಿ ಅಂತಾ ಮುಖಕ್ಕೆ ಹೊಡೆದಂತೆ ಹೇಳ್ತಾರೆ. ಅದರಲ್ಲೂ ಲಗ್ಗೆರೆ ಬ್ರಿಡ್ಜ್, ನವರಂಗ್, ದಾಸರಹಳ್ಳಿ, ಹೊಸಕೆರೆಹಳ್ಳಿ, ಮೂಡಲಪಾಳ್ಯಗಳಲ್ಲಿ ವಾಟರ್‌ ಟ್ಯಾಂಕರ್‌ ಮಾಲೀಕರು ಹೇಳಿದಷ್ಟೇ ದರ ಕೊಡಬೇಕಾಗಿದೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ಮಾಡಿದ ರಿಯಾಲಿಟಿ ಚೆಕ್ ಇಲ್ಲಿದೆ.

ಲಗ್ಗೆರೆ ಬ್ರಿಡ್ಜ್‌ ಸಮೀಪದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಟರ್‌ ಟ್ಯಾಂಕ್‌ ಮಾಲೀಕರು ಪ್ರತಿ 6,000 ಲೀಟರ್‌ ಟ್ಯಾಂಕರ್‌ ನೀರಿಗೆ 1,500 ರೂ.ಗೆ ಡಿಮ್ಯಾಂಡ್‌ ಮಾಡ್ತಿದ್ದಾರೆ. ಸ್ವಲ್ಪ ಕಡಿಮೆ ಮಾಡಕೊಳ್ಳಿ ಎಂದು ಸಾರ್ವಜನಿಕರು ಮನವಿ ಮಾಡಿದ್ರೆ, ಮತ್ತೊಂದು ಕಡೆ 3 ಸಾವಿರ ರೂಪಾಯಿ ಕೊಡ್ತಾರೆ, ಬೇಕಿದ್ದರೆ ತಗೊಳ್ಳಿ ಎಂದು ಹೇಳಿಹೋಗ್ತಾರೆ. ಇದನ್ನೂ ಓದಿ: ಇಂದು ರೈತರಿಂದ ʻದೆಹಲಿ ಚಲೋʼ – ಗಡಿಯಲ್ಲಿ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಅದೇ ರೀತಿ ನವರಂಗ್‌, ದಾಸರಹಳ್ಳಿ, ಹೊಸಕೆರೆಹಳ್ಳಿ, ಮೂಡಲಪಾಳ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ 3,000 ಲೀಟರ್‌ ಟ್ಯಾಂಕರ್‌ ನೀರಿಗೆ 700 ರೂಪಾಯಿಗಿಂತ ಕಡಿಮೆಯಿಲ್ಲ ಎಂದು ಮಾಲೀಕರು ಹೇಳುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಅತ್ತ ಹಣಕೊಟ್ಟು ಖರೀದಿಸಲಾಗದೇ, ಇತ್ತ ಕಾವೇರಿ ನೀರೂ ಸರಿಯಾಗಿ ಸಿಗದೇ ಪರದಾಡುವಂತಾಗಿದೆ.

ಸರ್ಕಾರ ಈ ರೀತಿ ಬೇಕಾಬಿಟ್ಟಿ ದರ ನಿಗದಿ ಮಾಡೋದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 1,078 ತಂಡಗಳು, 16,100 ಆಟಗಾರರು – ಮೋದಿ ತವರಲ್ಲಿ ʻಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ ಚಾಲನೆ  

Share This Article