ಕಲುಷಿತ ನೀರು ಕುಡಿದು ಸಾವು ಪ್ರಕರಣ: ತನಿಖಾ ತಂಡದಿಂದ ನಗರಸಭೆ ಅವ್ಯವಸ್ಥೆ ಪರಿಶೀಲನೆ – ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ?

Public TV
1 Min Read

ರಾಯಚೂರು: ನಗರಸಭೆ ಕಲುಷಿತ ನೀರು ಕುಡಿದು ಜನ ಸಾವನ್ನಪ್ಪುತ್ತಿರುವ ಹಿನ್ನೆಲೆ ತನಿಖಾ ತಂಡ ನಗರದಲ್ಲಿ ಪರಿಶೀಲನೆ ನಡೆಸಿದೆ. ಈ ಮಧ್ಯೆ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ರಾಯಚೂರು ನಗರಸಭೆಯ ಕಲುಷಿತ ನೀರು ಕುಡಿದು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ನಗರದ ಅಂದ್ರೂನ್ ಕಿಲ್ಲಾ ನಿವಾಸಿ 50 ವರ್ಷದ ಅಬ್ದುಲ್ ಕರೀಂ ವಾಂತಿ ಭೇದಿಯಿಂದ ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಸಾವಿಗೆ ನಗರಸಭೆ ಕಲುಷಿತ ನೀರು ಸೇವನೆ ಕಾರಣ ಎನ್ನಲಾಗಿದೆ. ಮೃತ ವ್ಯಕ್ತಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದುದರಿಂದ ವೈದ್ಯರು ಅಂತಿಮ ವರದಿ ನೀಡಬೇಕಿದೆ. ಅಬ್ದುಲ್ ಕರೀಂ ಸಾವಿಗೆ ನಿರ್ಜಲೀಕರಣವೇ ಕಾರಣ ಎಂದು ವರದಿ ಬಂದರೆ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಲಿದೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು 4 ಸಾವು ಪ್ರಕರಣ – ಜನರಲ್ಲಿ ಇನ್ನೂ ನಿಲ್ಲದ ವಾಂತಿ, ಭೇದಿ

ಈಗಾಗಲೇ ಮೂರು ಜನ ವಾಂತಿ ಭೇದಿ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿ ಲೋ ಬಿಪಿ, ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳ ಹಿನ್ನೆಲೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಅರ್ಚನಾ ನೇತೃತ್ವದ ತನಿಖಾ ತಂಡ ಪರಿಶೀಲನೆ ಮಾಡುತ್ತಿದೆ. ಜನರಿಗೆ ತೊಂದರೆಯಾಗಿರುವುದಕ್ಕೆ ಶುದ್ದೀಕರಣ ಘಟಕದ ಜೊತೆ ಪೈಪ್ ಲೈನ್ ಕಾರಣವಾಗಿದೆ. ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಲ್ಲವನ್ನೂ ಸರಿಪಡಿಸಿಕೊಳ್ಳಲು ಎಚ್ಚರಿಕೆ ನೀಡಲಾಗಿದೆ ಎಂದು ಅರ್ಚನಾ ತಿಳಿಸಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಸಾವು ಪ್ರಕರಣ – ಮೃತರ ಕುಟುಂಬಕ್ಕೆ ನಗರಸಭೆಯಿಂದ ತಲಾ 10 ಲಕ್ಷ ರೂ. ಪರಿಹಾರ

ನಗರಸಭೆಯಲ್ಲಿ ಅಗತ್ಯ ಅನುದಾನವಿದ್ದರೂ ಸಮರ್ಪಕವಾಗಿ ಬಳಸದೆ ನಿರ್ಲಕ್ಷ್ಯವಹಿಸಿರುವುದು ಬಯಲಾಗಿದೆ. ಈಗಾಗಲೇ ಆಸ್ಪತ್ರೆಗೆ ದಾಖಲಾಗಿರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ನೀರಿನ ಮಾದರಿಗಳ ವರದಿ ಆದರದ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಹೇಳಿದ್ದಾರೆ. ಆದ್ರೆ ಮೂರು ಸಾವು ನೂರಾರು ಜನ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಕೇವಲ ಇಬ್ಬರು ಅಧಿಕಾರಿಗಳ ಮೇಲೆ ಕ್ರಮವಹಿಸಿ ಸರ್ಕಾರ ಸುಮ್ಮನಾಗಿದೆ.

Share This Article
Leave a Comment

Leave a Reply

Your email address will not be published. Required fields are marked *