ಪೊಲೀಸ್ ಕಾನ್‌ಸ್ಟೇಬಲ್‌ ಪರೀಕ್ಷೆ; ಪೂರ್ಣ ತೋಳಿನ ಶರ್ಟ್‌, ಜೀನ್ಸ್‌ ಪ್ಯಾಂಟ್‌ ಧರಿಸುವಂತಿಲ್ಲ

Public TV
2 Min Read

– ಪೊಲೀಸ್‌ ಆಯುಕ್ತರಿಂದ ವಸ್ತ್ರಸಂಹಿತೆ ಬಿಡುಗಡೆ

ಬೆಂಗಳೂರು: ಇದೇ ತಿಂಗಳ 25 ರಂದು ನಡೆಯಲಿರುವ ಪೊಲೀಸ್ ಕಾನ್‌ಸ್ಟೇಬಲ್ (Police Constable) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನಗರ ಪೊಲೀಸ್ ಆಯುಕ್ತರು ವಸ್ತ್ರಸಂಹಿತೆಯನ್ನ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು (Bengaluru) ನಗರದಲ್ಲಿ 63 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 34,180 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹಾಗಾಗಿ ಪರೀಕ್ಷೆ ಹಾಜರಾಗುವ ಅಭ್ಯರ್ಥಿಗಳು ವಸ್ತ್ರಸಂಹಿತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲದೇ ಹೋದರೆ ಪರೀಕ್ಷಾ ಕೇಂದ್ರದ ಒಳಗಡೆ ಅಭ್ಯರ್ಥಿಗಳಿಗೆ ಎಂಟ್ರಿ ನಿರಾಕರಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ. ಹಾಗಾದರೆ ಕಾನ್‌ಸ್ಟೇಬಲ್ ಪರೀಕ್ಷೆಗೆ ಹಾಜರಾಗುವಂತಹ ಮಹಿಳಾ, ಪುರುಷ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳು ಪಾಲನೆ ಮಾಡಬೇಕಾದ ವಸ್ತ್ರಸಂಹಿತೆ ಹೀಗಿದೆ. ಇದನ್ನೂ ಓದಿ: ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್

ಪುರುಷ ಮತ್ತು ತೃತೀಯಲಿಂಗಿ ಪುರುಷ ಅಭ್ಯರ್ಥಿಗಳ ವಸ್ತ್ರ ಸಂಹಿತೆ:
1) ಪುರುಷ ಮತ್ತು ತೃತಿಯಲಿಂಗಿ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್‌ಗಳನ್ನು ಧರಿಸುವುದು. ಜಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳು ಇರುವ ಶರ್ಟ್‌ಗಳನ್ನು ಧರಿಸತಕ್ಕದ್ದಲ್ಲ.
2) ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‌ಗಳನ್ನು ಧರಿಸತಕ್ಕದ್ದಲ್ಲ.
3) ಪರೀಕ್ಷಾ ಕೇಂದ್ರದೊಳಗೆ ಹೂಗಳನ್ನು ನಿಷೇದಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಬಾಗವಿರುವ ಪಾದರಕ್ಷೆಗಳನ್ನು (ಚಪ್ಪಲಿ) ಧರಿಸುವುದು.
4) ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡತಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಇದನ್ನೂ ಓದಿ: ಕೆಇಎ: ಸ್ಯಾಟ್ಸ್ ಮಾಹಿತಿ ತಿದ್ದುಪಡಿಗೆ ಅವಕಾಶ

ಮಹಿಳೆ ಮತ್ತು ತೃತೀಯಲಿಂಗಿ ಮಹಿಳಾ ಅಭ್ಯರ್ಥಿಗಳ ವಸ್ತಸಂಹಿತೆ
1) ಮಹಿಳೆ ಮತ್ತು ತೃತೀಯಲಿಂಗಿ ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ.
2) ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು/ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಅಭ್ಯರ್ಥಿಗಳು ಧರಿಸುವಂತೆ ನಿರ್ದೇಶಿಸಲಾಗಿದೆ.
3) ಎತ್ತರವಾದ ಹಿಮ್ಮಡಿಯ ಶೂಗಳನ್ನು/ಚಪ್ಪಲಿಗಳನ್ನು ಮತ್ತು ದಪ್ಪವಾದ ಆಡಿ ಭಾಗ ಹೊಂದಿರುವ ಶೂಗಳನ್ನಾಗಲಿ/ಚಪ್ಪಲಿಗಳನ್ನಾಗಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ.
4) ಮಹಿಳೆ ಮತ್ತೆ ತೃತೀಯಲಿಂಗಿ ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದು ನಿಷೇಧಿಸಿದೆ. (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ).

Share This Article