ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಲಿದೆ: ವಿಎಚ್‍ಪಿ

Public TV
2 Min Read

ಮಂಗಳೂರು: ದೇವಸ್ಥಾನಗಳಿಗೆ ಭಕ್ತರು ತಮ್ಮಿಷ್ಟದಂತೆ ಡ್ರೆಸ್ ತೊಟ್ಟು ಬರುತ್ತಾರೆ. ಆದರೆ ಇದು ಕೆಲವು ಮಂದಿಯ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಗೆ ಸರ್ಕಾರಕ್ಕೆ ತರಲು ಒತ್ತಾಯಿಸಿದ್ದಾರೆ. ಅದರಲ್ಲೂ ವಿಶ್ವ ಹಿಂದೂ ಪರಿಷತ್, ರಾಜ್ಯದ ನಂಬರ್ ಒನ್ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಪಣತೊಟ್ಟಿದೆ.

ನೆರೆಯ ರಾಜ್ಯಗಳಾದ ಕೇರಳ ಮತ್ತು ಆಂಧ್ರದಲ್ಲಿರುವಂತೆ ರಾಜ್ಯದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಲು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸರ್ಕಾರವನ್ನು ಆಗ್ರಹಿಸಿದೆ. ಇದಕ್ಕೆ ಪೂರ್ವಭಾವಿ ಎಂಬಂತೆ ರಾಜ್ಯದ ನಂಬರ್ ಒನ್ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮುಜರಾಯಿ ಇಲಾಖೆಗೆ ಮನವಿ ಮಾಡಿದ್ದು, ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಲ ಭಕ್ತರು ಅಸಭ್ಯವಾಗಿ ಡ್ರೆಸ್ ಹಾಕುವ ಬಗ್ಗೆ ಕೆಲ ಭಕ್ತ ಗಣ ಸ್ಥಳೀಯ ವಿಎಚ್‌ಪಿ ಮುಖಂಡರ ಬಳಿ ದೂರು ಕೊಟ್ಟಿದ್ದು, ಇದೇ ದೂರಿನ ಅನುಸಾರವಾಗಿ ವಿಎಚ್‍ಪಿ ಮತ್ತು ಬಜರಂಗ ದಳದ ಪ್ರಮುಖರು ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಗೆ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಮನವಿ ಮಾಡಿದೆ.

ಕೆಲವರ ಡ್ರೆಸ್ ಕೋಡ್ ನಿಂದ ಭಕ್ತರ ಮನಸ್ಸು ಚಂಚಲಗೊಳ್ಳುತ್ತಿದ್ದು, ಪುರುಷರು ಪಂಚೆ ಅಥವಾ ಧೋತಿ, ಮಹಿಳೆಯರು ಸೀರೆಯಲ್ಲಿ ದೇವಸ್ಥಾನಕ್ಕೆ ಬರಲು ಆದೇಶಿಸುವಂತೆ ಮನವಿ ಮಾಡಲಾಗಿದೆ ಎಂದು ವಿಎಚ್‍ಪಿಯ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಕಾಂಗ್ರೆಸ್ ಮಾತ್ರ ವಿಎಚ್‍ಪಿ ಮನವಿ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಭಕ್ತರ ಒತ್ತಡ ಹೇರಿಕೆಯ ಕೆಲಸವಾಗುತ್ತಿದ್ದು, ಭಕ್ತರ ಸ್ವಾತಂತ್ರ್ಯಕ್ಕೆ ಬಿಟ್ಟು ಬಿಡಬೇಕು. ಸರ್ಕಾರ ದೇವಸ್ಥಾನಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆ ಭಕ್ತರು ಈ ಹಿಂದೆ ಬರುತ್ತಿದ್ದಂತೆಯೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಈ ಗೊಂದಲ ಬಗ್ಗೆ ಸರ್ಕಾರ ಯಾವುದೇ ನಿರ್ಧಾರಕ್ಕೆ ಬರಲಿಲ್ಲ. ಆದರೆ ಹಲವು ದೇವಸ್ಥಾನಗಳಿಂದ ವಸ್ತ್ರ ಸಂಹಿತೆ ಜಾರಿಗೊಳಿಸುವ ಬಗ್ಗೆ ಮನವಿಗಳು ಬಂದಿದ್ದು, ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಆದರೆ ಸರ್ಕಾರ ಭಕ್ತರಿಗೆ ವಸ್ತ್ರ ಸಂಹಿತೆಯ ನಿಯಮ ವಿಧಿಸುತ್ತಾ ಅಥವಾ ಭಕ್ತರ ಇಷ್ಟಾನುಸಾರವಾಗಿ ಬಿಟ್ಟುಕೊಡುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *