ಮಂಗಳೂರು: ಕೆಲಸಕ್ಕೆ ಬಾರದ ಡ್ರೆಜ್ಜಿಂಗ್ ಹಡಗೊಂದನ್ನು ಮಂಗಳೂರು ಬಳಿಯ ಸಮುದ್ರದಲ್ಲಿ ಮುಳುಗಿಸಿ ವಿಮೆ ಪರಿಹಾರ ಪಡೆಯುವ ಹುನ್ನಾರ ಕೇಳಿಬಂದಿದೆ.
ಮಂಗಳೂರಿನ ಸುರತ್ಕಲ್ ಬಳಿಯ ಸಮುದ್ರ ಮಧ್ಯೆ ಕಳೆದ ಆರು ತಿಂಗಳಿಂದ ಮುಂಬೈ ಮೂಲದ ದಿ ಮರ್ಕೇಟರ್ ಲಿಮಿಟೆಡ್ ಕಂಪನಿಗೆ ಸೇರಿದ ಭಗವತಿ ಪ್ರೇಮ್ ಹೆಸರಿನ ಡ್ರೆಜ್ಜಿಂಗ್ ಹಡಗು ಲಂಗರು ಹಾಕಿದೆ. ಈ ಬಗ್ಗೆ ಮಂಗಳೂರಿನ ಎನ್‍ಎಂಪಿಟಿ ಬಂದರು ಅಧಿಕಾರಿಗಳು ಹಡಗು ತೆರವು ಮಾಡುವಂತೆ ಸೂಚನೆ ನೀಡಿದ್ದರೂ ಕಂಪನಿ ನಿರ್ಲಕ್ಷ್ಯ ತೋರಿತ್ತು.
ಮಳೆಗಾಲದಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗುವ ಬಗ್ಗೆಯೂ ಎಚ್ಚರಿಕೆ ನೀಡಲಾಗಿತ್ತು. ಎರಡು ದಿನಗಳ ಹಿಂದೆ ಹಡಗಿನಲ್ಲಿ ಸೋರಿಕೆ ಆಗುತ್ತಿದ್ದು ಅಪಾಯಕ್ಕೀಡಾಗಿರುವ ಬಗ್ಗೆ ಎನ್‍ಎಂಪಿಟಿ ಅಧಿಕಾರಿಗಳಿಗೆ ರಕ್ಷಣೆಗೆ ಕರೆ ಬಂದಿತ್ತು. ಇದೀಗ ಹಡಗಿನಲ್ಲಿದ್ದ 15 ಮಂದಿ ಕಾರ್ಮಿಕರನ್ನು ರಕ್ಷಿಸಿ, ಹಡಗನ್ನು ಸಮುದ್ರ ಮಧ್ಯದಿಂದ ಸುರತ್ಕಲ್ ಕಡಲ ತೀರಕ್ಕೆ ತಂದು ನಿಲ್ಲಿಸಲಾಗಿದೆ.
ಒಂದು ವೇಳೆ ಹಡಗು ಒಡೆದು ಸಮುದ್ರ ಪಾಲಾದರೆ ಅಪಾರ ಪ್ರಮಾಣದ ಮಾಲಿನ್ಯವಾಗುತ್ತದೆ. ಹಾಗಿದ್ದರೂ ಎನ್‍ಎಂಪಿಟಿ ಅಧಿಕಾರಿಗಳು ಹಡಗಿನಿಂದ ಯಾವುದೇ ಅಪಾಯ ಇಲ್ಲವೆಂದು ಪ್ರಕಟಣೆ ನೀಡಿದ್ದಾರೆ. ಹೀಗಾಗಿ ಕಂಪನಿ ಮತ್ತು ಎನ್‍ಎಂಪಿಟಿ ಅಧಿಕಾರಿಗಳು ಸೇರಿ ಹಡಗನ್ನು ಮುಳುಗಿಸಿ ಕೋಟ್ಯಂತರ ವಿಮಾ ಹಣವನ್ನು ದೋಚಲು ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ.