ಮ್ಯಾನ್ ಪೋರ್ಟಬಲ್ ಆಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿಯ ಯಶಸ್ವಿ ಪ್ರಯೋಗ ನಡೆಸಿದ ಡಿಆರ್‌ಡಿಒ

Public TV
2 Min Read

– 2034-35ರ ವೇಳೆಗೆ ಸೇನೆ ಸೇರಲಿದೆ ಎಎಂಸಿಎ ಫೈಟರ್ ಜೆಟ್

ನವದೆಹಲಿ: ಡಿಆರ್‌ಡಿಒ (DRDO) ತಯಾರಿಸಿದ `ಮ್ಯಾನ್-ಪೋರ್ಟಬಲ್ ಆಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿಯನ್ನು (ಎಂಪಿಎಟಿಜಿಎಂ) (Portable Anti Tank Missile System) ಯಶಸ್ವಿಯಾಗಿ ಪರೀಕ್ಷಿಸಿದೆ. ಇತ್ತೀಚೆಗೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಫೀಲ್ಡ್ ಫೈರಿಂಗ್ ರೇಂಜ್‍ನಲ್ಲಿ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್‍ನಲ್ಲಿ ಸಿಡಿತಲೆ ಹಾರಾಟದ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಆಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಅಥವಾ ಎಟಿಜಿಎಂ ವ್ಯವಸ್ಥೆಯು ಹಗಲು ರಾತ್ರಿ ಎರಡು ಸಮಯದಲ್ಲೂ ಕಾರ್ಯನಿರ್ವಹಿಸಲು ಸೂಕ್ತವಾಗಿದೆ. ಪ್ರಬಲ ದಾಳಿಯ ಸಾಮರ್ಥ್ಯ ಹೊಂದಿದೆ. ಅಲ್ಲದೇ ಈ ಕ್ಷಿಪಣಿ ಲಾಂಚರ್, ಟಾರ್ಗೆಟ್ ಅಕ್ವಿಸಿಷನ್ ಸಿಸ್ಟಮ್ ಮತ್ತು ಅಗ್ನಿ ನಿಯಂತ್ರಣ ಘಟಕವನ್ನು ಒಳಗೊಂಡಿದೆ. ಇದು 14.50 ಕೆಜಿ ತೂಕವಿದ್ದು, 4 ಕಿಮೀ ದೂರದಲ್ಲಿರುವ ಗುರಿಯನ್ನು ಛಿದ್ರಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ವ್ಯವಸ್ಥೆಯ ಯಶಸ್ವಿ ಪ್ರಯೋಗಕ್ಕಾಗಿ ಡಿಆರ್‌ಡಿಒ ಮತ್ತು ಭಾರತೀಯ ಸೇನೆಯನ್ನು ಅಭಿನಂದಿಸಿದ್ದಾರೆ. ಸುಧಾರಿತ ತಂತ್ರಜ್ಞಾನ ಆಧಾರಿತ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸಲು ಇದು ಒಂದು ಪ್ರಮುಖ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ ಕಾಮತ್, ತಮಿಳುನಾಡಿನ ಸೂಲೂರಿನಲ್ಲಿ ನಡೆಯುತ್ತಿರುವ ತರಂಗ್ ಶಕ್ತಿ ಕಸರತ್ತಿನಲ್ಲಿ ಹಲವಾರು ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದೆ. ಭಾರತೀಯ ವಾಯುಪಡೆಯ ತರಂಗ್ ಶಕ್ತಿ ಕಸರತ್ತಿನಲ್ಲಿ ದೇಶೀಯ ಶಸ್ತ್ರಾಸ್ತ್ರಗಳನ್ನ ಪ್ರದರ್ಶಿಸಲು ಇದು ಒಂದು ಅವಕಾಶವಾಗಿದೆ ಎಂದು ಹೇಳಿದ್ದಾರೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಎಎಂಸಿಎ ಫೈಟರ್ ಜೆಟ್ ಬಗ್ಗೆ ಮಾತನಾಡಿ, ಇದು ರಹಸ್ಯ ವಿಮಾನವಾಗಿದೆ. ಎಎಂಸಿಎ 5.5 ಪೀಳಿಗೆಯ ಯುದ್ಧವಿಮಾನವಾಗಿದೆ. ಇದರ ವಿನ್ಯಾಸವು ಪೂರ್ಣಗೊಂಡಿದೆ ಮತ್ತು ನಮ್ಮ ಅಭಿವೃದ್ಧಿ ಪ್ರಯೋಗಗಳನ್ನು ಪೂರ್ಣಗೊಳಿಸಲು ತಯಾರಿ ನಡೆಸಿದ್ದೇವೆ. 2034ರ -2035ರ ವೇಳೆಗೆ ಸೇನೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.

Share This Article