ಕುಡಿಯುವ ನೀರಿನ ಪೈಪಿಗೆ ಚರಂಡಿ ನೀರು ಮಿಶ್ರಣ – ಶಿವಮೊಗ್ಗದ ಬಡಾವಣೆಯ ಜನ ಕಂಗಾಲು

Public TV
2 Min Read

– ಒಂದು ವಾರದಿಂದ ಆರೋಗ್ಯದಲ್ಲಿ ಏರುಪೇರು
– ಟ್ಯಾಂಕರ್ ಮೂಲಕ ನೀರು ಪೊರೈಕೆ

ಶಿವಮೊಗ್ಗ: ಕಲುಷಿತ ನೀರಿನಿಂದಾಗಿ ಜನತೆ ಕಂಗಾಲಾಗಿರುವ ಘಟನೆ ನಗರದ ದುರ್ಗಿಗುಡಿ ಬಡಾವಣೆಯಲ್ಲಿ ನಡೆದಿದೆ. ಕಳೆದೊಂದು ವಾರದಿಂದ ಕಲುಷಿತ ನೀರು ಸೇವನೆಯಿಂದಾಗಿ ಈ ಬಡಾವಣೆ ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಚರಂಡಿ ನೀರು ಕುಡಿಯುವ ನೀರಿನ ಪೈಪ್ ಗೆ ಸೇರ್ಪಡೆಗೊಂಡಿದೆ ಎಂಬ ಅನುಮಾನದ ಮೇರೆಗೆ ಇದೀಗ ಈ ಬಡಾವಣೆಯಲ್ಲಿ ಗುಂಡಿ ತೋಡಿ ಹುಡುಕಾಟ ನಡೆಸಲಾಗುತ್ತಿದೆ.

ನೀರನ್ನು ನೋಡಿದ್ರೆ ಕುಡಿಯೋದು ಇರಲಿ, ಕೈ ತೊಳೆಯುವುದಕ್ಕು ಮನಸ್ಸು ಬರುವುದಿಲ್ಲ. ಆದರೆ ಇದೇ ನೀರನ್ನು ದುರ್ಗಿಗುಡಿ ಬಡಾವಣೆ ಜನರು ಕುಡಿದು ತಮ್ಮ ಆರೋಗ್ಯದಲ್ಲಿ ಏರುಪೇರು ಮಾಡಿಕೊಂಡಿದ್ದಾರೆ. ಕಳೆದೊಂದು ವಾರದಿಂದಲೂ ಇದೇ ರೀತಿ ಕುಡಿಯುವ ನೀರು ಬರುತ್ತಿದ್ದು, ಇದನ್ನು ಗಮನಿಸದೇ ಸೇವಿಸಿರುವ ಜನರು ಇದೀಗ ಪಾಲಿಕೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

ಈಗಾಗಲೇ ಸ್ಮಾರ್ಟ್ ಸಿಟಿಗಾಗಿ ಶಿವಮೊಗ್ಗ ನಗರದಲೆಲ್ಲಾ ಗುಂಡಿಗಳನ್ನು ತೆಗೆಯಲಾಗಿದೆ. ಹೀಗೆ ಗುಂಡಿ ತೆಗೆಯುವ ವೇಳೆ ಒಳ ಚರಂಡಿ ಪೈಪ್ ಒಡೆದು ಹೋಗಿದ್ದು, ಕುಡಿಯುವ ನೀರಿನ ಜೊತೆ ಮಿಕ್ಸ್ ಆಗಿ ಬರುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದೊಂದು ವಾರದಿಂದ ಇದೇ ನೀರನ್ನು ಕುಡಿದಿರುವ ಈ ಬಡಾವಣೆ ಮಂದಿ ವಾಂತಿ, ಬೇಧಿಯಿಂದ ಬಳಲಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಈಗಾಗಲೇ ಪಾಲಿಕೆಗೆ ಈ ಬಗ್ಗೆ ಬಡಾವಣೆ ನಿವಾಸಿಗಳು ದೂರು ನೀಡಿದ್ದು ಪಾಲಿಕೆ ಅಧಿಕಾರಿಗಳು ಗುಂಡಿ ತೆಗೆಯಲು ಆರಂಭಿಸಿದ್ದಾರೆ. ಆದರೆ ಎಲ್ಲಿ ಒಳಚರಂಡಿ ನೀರು ಕುಡಿಯುವ ನೀರಿಗೆ ಮಿಶ್ರಣ ಆಗಿದೆ ಎಂದು ಹುಡುಕುವುದು ಕಷ್ಟಕರವಾಗಿದೆ. ಒಳಚರಂಡಿ ನೀರೇ ಕುಡಿಯುವ ನೀರಿಗೆ ಸೇರಿಕೊಂಡಿರುವುದರ ಬಗ್ಗೆ ಬಡಾವಣೆ ನಿವಾಸಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕಳೆದೆರೆಡು ದಿನಗಳಿಂದ ಪಾಲಿಕೆ ನೀರು ಬಳಸದೇ ಹಣ ನೀಡಿ ಕುಡಿಯುವ ನೀರನ್ನು ಬಡಾವಣೆ ನಿವಾಸಿಗಳು ತರಿಸಿಕೊಂಡು ಕುಡಿಯತೊಡಗಿದ್ದಾರೆ.

ಈ ಬಗ್ಗೆ ಪಾಲಿಕೆ ಉಪಮೇಯರ್ ಎಸ್.ಎನ್. ಚನ್ನಬಸಪ್ಪ ಅವರನ್ನು ಕೇಳಿದರೆ ಈ ರೀತಿ ಸಮಸ್ಯೆಗಳು ಆಗುತ್ತಲೇ ಇರುತ್ತದೆ. ನಮಗೆ ಗೊತ್ತಿಲ್ಲದೇ ಆಗುವ ಅನಾಹುತಗಳಿಗೆ ಸ್ಪಂಧಿಸುವ ಕೆಲಸವಾಗಿದೆ. ಎಲ್ಲಿಂದ ಈ ಸಮಸ್ಯೆ ಶುರುವಾಗಿದೆ ಎಂಬುದನ್ನು ಪತ್ತೆ ಹಚ್ಚಿ ಕಾಮಗಾರಿ ನಡೆಸಿ ಸಮಸ್ಯೆ ನಿವಾರಿಸುವ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ. ಟ್ಯಾಂಕರ್ ಮೂಲಕ ಬಡಾವಣೆಗೆ ನೀರು ಪೂರೈಸಲಾಗುತ್ತಿದ್ದು, ಶೀಘ್ರದಲ್ಲೇ ಸಮಸ್ಯೆ ನಿವಾರಣೆಯ ಭರವಸೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಈ ದುರ್ಗಿಗುಡಿ ಬಡಾವಣೆಯಲ್ಲಿ ಈ ರೀತಿ ಕಲುಷಿತ ನೀರನ್ನು ಜನರು ಕುಡಿಯುವತಾಗಿದ್ದು, ಜನರು ಕೂಡ ಎಚ್ಚೆತ್ತುಕೊಳ್ಳಬೇಕಿದೆ. ಈ ಸಮಸ್ಯೆ ಬಗೆಹರಿಯುವವರೆಗೂ, ಈ ಬಡಾವಣೆಯಲ್ಲಿರುವ ಹೋಟೆಲ್‍ಗಳು ಮತ್ತು ಕ್ಯಾಂಟೀನ್‍ಗಳು ಕೂಡ ಈ ಬಗ್ಗೆ ಗಮನಹರಿಸಬೇಕಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕೂಡಲೇ ಎಲ್ಲಿ ಕಲುಷಿತ ನೀರು ಸೇರಿಕೊಳ್ಳುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಸಮಸ್ಯೆ ಬಗೆಹರಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *