ಆ.16 ರಂದು ಅಟಲ್ ಸ್ಮರಣಸಂಚಿಕೆ ಲೋಕಾರ್ಪಣೆ: ಡಾ. ಶಿವಯೋಗಿಸ್ವಾಮಿ

Public TV
2 Min Read

ಬೆಂಗಳೂರು: ಭಾರತ ಕಂಡ ಅಪರೂಪದ ಪ್ರಧಾನಿ ಭಾರತರತ್ನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಜೀ (Atal Bihari Vajpayee) ಅವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮವನ್ನು ನಾಳೆ (ಆಗಸ್ಟ್ 16) ಆಯೋಜಿಸಲಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎ.ಹೆಚ್.ಶಿವಯೋಗಿಸ್ವಾಮಿ (A H Shivayogiswamy) ತಿಳಿಸಿದ್ದಾರೆ.

ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಟಲ್ ಜೀ ಅವರ ಜೀವನ ಮತ್ತು ಸಾಧನೆಯನ್ನು ಯುವಜನತೆ ಮತ್ತು ಎಲ್ಲ ಜನರಿಗೆ ತಲುಪಿಸಲು ಅವರ ಸ್ಮರಣಸಂಚಿಕೆ ಲೋಕಾರ್ಪಣೆ ಸಂಬಂಧ ಆ.16 ರ ಸಂಜೆ 4:30 ಕ್ಕೆ ಟೌನ್‌ಹಾಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಅಟಲ್ ಜೀ ಅವರ ಕಾಲದಲ್ಲಿ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ಅವರ ಧರ್ಮಪತ್ನಿ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್, ಬೆಂಗಳೂರಿನ ಎಲ್ಲ ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ವರ್ಷದ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ ಮೇಡ್‌ ಇನ್‌ ಇಂಡಿಯಾ ಚಿಪ್‌: ಮೋದಿ ಘೋಷಣೆ

ವಾಜಪೇಯಿ ಜೀ ಅವರ ಜನ್ಮ ಶತಮಾನೋತ್ಸವ ಸಂಬಂಧ ವರ್ಷಪೂರ್ತಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿತ್ತು. ಕೇಂದ್ರದ ಯೋಜನೆಯಂತೆ ರಾಜ್ಯದಲ್ಲಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರ ಮಾರ್ಗದರ್ಶನದಲ್ಲಿ ಕಳೆದ ಜನವರಿಯಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿದ್ದೇವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: BBK 12 | ಬಿಗ್‌ಬಾಸ್ ಸೀಸನ್-12 – ಈ ಸಲ ಕಿಚ್ಚು ಹೆಚ್ಚು!

ಅಟಲ್ ಜೀ ಕಾಲಘಟ್ಟದಲ್ಲಿ ಕೆಲಸ ಮಾಡಿದ ಅವರ ಒಡನಾಡಿಗಳು, ಅವರ ಕಾಲದಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡಿದ ಹಿರಿಯರ ಮನೆಗಳಿಗೆ ತೆರಳಿ ಅವರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಹಿರಿಯರ ಅನುಭವ, ಅನಿಸಿಕೆಗಳನ್ನೂ ಸಂಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಜನವರಿಯಲ್ಲಿ ಅಟಲ್ ಸ್ಮೃತಿ ಸಂಗ್ರಹ, ಫೆಬ್ರವರಿಯಲ್ಲಿ ಅಟಲ್ ವಿರಾಸತ್ ಸಮ್ಮೇಳನವನ್ನು ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ ನಡೆಸಿದ್ದೇವೆ. ಬೀದರ್ ಜಿಲ್ಲೆಯಲ್ಲಿ ಬಹುಭಾಷಾ ಸಮ್ಮೇಳನ ಮತ್ತು ಯುವ ಮೋರ್ಚಾ ನೇತೃತ್ವದಲ್ಲಿ ಅಟಲ್ ವಿರಾಸತ್ ವಾಕಥಾನ್ ನಡಿಗೆ, ಬಾಗಲಕೋಟೆ ಜಿಲ್ಲೆಯಲ್ಲಿ ಹಲಗಿ ಮಜಲು ಸ್ಪರ್ಧೆ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಮಯ ಬಂದಾಗ ಮತ್ತೆ ಸಚಿವ ಸ್ಥಾನ ಪಡೆಯುತ್ತೇನೆ: ಕೆ.ಎನ್.ರಾಜಣ್ಣ

ವಿವಿಧ ಸ್ಪರ್ಧೆಗಳ ಆಯೋಜನೆ
ನಾಳೆ ಟೌನ್‌ಹಾಲ್‌ನಲ್ಲಿ ಚಿತ್ರ ನಮನ ಸ್ಪರ್ಧೆ ಮತ್ತು ಸ್ವರ ನಮನ ನಡೆಯಲಿದೆ. ಬೆಂಗಳೂರಿನಲ್ಲಿ ರಂಗೋಲಿ ನಮನ ಸ್ಫರ್ಧೆ ನಡೆದಿದ್ದು, 200 ಕ್ಕಿಂತ ಹೆಚ್ಚು ಮಹಿಳೆಯರು ಭಾಗವಹಿಸಿದ್ದಾರೆ. ನುಡಿ ನಮನ ಸ್ಪರ್ಧೆಯಲ್ಲಿ 300 ಕ್ಕಿಂತ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬರಹ ನಮನ ಸ್ಪರ್ಧೆಯಲ್ಲಿ 350 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ನಾಳೆ ಬಹುಮಾನ ವಿತರಿಸಲಾಗುವುದು ಎಂದಿದ್ದಾರೆ.

ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್, ಅಟಲ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಸಂಚಾಲಕ ಜಗದೀಶ್ ಹಿರೇಮನಿ, ಸಹ-ಸಂಚಾಲಕ ಫಣೀಶ್ ಅವರು ಉಪಸ್ಥಿತರಿದ್ದರು.

Share This Article