ಪ್ರವೀಣ್ ರೆಡ್ಡಿ ಬರ್ತ್ ಡೇಗೆ ಡಾ.56 ಗಿಫ್ಟ್!

Public TV
2 Min Read

ಬೆಂಗಳೂರು: ಮದುವೆಯಾದ ನಂತರ ಒಂದಷ್ಟು ಕಾಲ ಚಿತ್ರರಂಗದಿಂದ ದೂರವುಳಿದಿದ್ದ ಪ್ರಿಯಾಮಣಿ ಮತ್ತೆ ಟ್ರ್ಯಾಕಿಗೆ ಮರಳಿದ್ದಾರೆ. ಇದೀಗ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರೋ ಅವರ ಲಿಸ್ಟಿನಲ್ಲಿ ಬಿಡುಗಡೆಯ ಹಾದಿಯಲ್ಲಿರೋ ಚಿತ್ರ ಡಾ. 56. ಮಹಿಳಾ ಪ್ರಧಾನ ಕಥೆಯನ್ನೊಳಗೊಂಡಿರೋ ಈ ಸೈನ್ಸ್ ಫಿಕ್ಷನ್ ಸಿನಿಮಾ ವಿಶಿಷ್ಟವಾದ ಟೈಟಲ್ ಮತ್ತು ಅದಕ್ಕೆ ತಕ್ಕುದಾದ ಕಥೆಯ ಛಾಯೆಯೊಂದಿಗೆ ಸುದ್ದಿ ಕೇಂದ್ರದಲ್ಲಿದೆ. ಇದನ್ನು ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವವರು ಪ್ರವೀಣ್ ರೆಡ್ಡಿ. ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದೆ.

ಪ್ರವೀಣ್ ರೆಡ್ಡಿಯವರು ಮಾಸ್ ಲುಕ್ಕಿನಲ್ಲಿ ಮಿಂಚಿರೋ ಈ ಮೋಷನ್ ಪೋಸ್ಟರ್ ಮೂಲಕವೇ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲಾಗಿದೆ. ಈ ಮೂಲಕ ಡಾ. 56 ಸಿನಿಮಾ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಯೂ ಆರಂಭವಾಗಿದೆ. ಈ ಸಿನಿಮಾದಲ್ಲಿ ಪ್ರವೀಣ್ ರೆಡ್ಡಿ ಒಂದಷ್ಟು ಮಹತ್ವದ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ. ಇದನ್ನು ನಿರ್ಮಾಣ ಮಾಡೋದರೊಂದಿಗೆ ಕಥೆ ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಇದರ ಜೊತೆಗೇ ಪ್ರಧಾನ ಪಾತ್ರವೊಂದರಲ್ಲಿಯೂ ನಟಿಸಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಚಿತ್ರ ತಂಡ ಈ ಮೋಷನ್ ಪೋಸ್ಟರ್ ಮೂಲಕ ಖುಷಿಗೊಳ್ಳುವಂಥಾ ಗಿಫ್ಟ್ ಅನ್ನೇ ಕೊಟ್ಟಿದೆ.

ಈ ಸಿನಿಮಾ ಪ್ರಿಯಾಮಣಿ ಪಾಲಿಗೂ ಮಹತ್ವದ್ದು. ಕನ್ನಡದ ಮಟ್ಟಿಗೆ ತೀರಾ ಹೊಸತೆನ್ನಿಸೋ ಕಥೆಯನ್ನೊಳಗೊಂಡಿರೋ ಈ ಸಿನಿಮಾದಲ್ಲಿ ಅವರು ಖಡಕ್ ಸಿಬಿಐ ಅಧಿಕಾರಿಯಾಗಿ ಮಿಂಚಿದ್ದಾರೆ. ಒಂದು ವಿಚಿತ್ರ ಸನ್ನಿವೇಶ ಮತ್ತು ಮರ್ಡರ್ ಮಿಸ್ಟರಿಯನ್ನು ಬೇಧಿಸುವ ಪಾತ್ರದಲ್ಲಿ ಅವರು ನಟಿಸಿದ್ದಾರಂತೆ. ವಿಶೇಷವೆಂದರೆ ಡಾ.56 ಅವರ ವೃತ್ತಿ ಜೀವನದಲ್ಲಿ 56ನೇ ಚಿತ್ರ. ತಾನು ಇದುವರೆಗೆ ನಟಿಸಿರೋ ಚಿತ್ರಗಳ ಮೊತ್ತವೇ ಸಿನಿಮಾ ಟೈಟಲ್ಲೂ ಆಗಿರೋದರಿಂದ ಪ್ರಿಯಾಮಣಿಗೆ ಡಬಲ್ ಖುಷಿಯೇ ಸಿಕ್ಕಿದೆ.

https://www.youtube.com/watch?v=CxKaywzyALw

ಹರಿಹರ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಪ್ರವೀಣ್ ರೆಡ್ಡಿಯವರೇ ಕಥೆ ಚಿತ್ರಕಥೆಯನ್ನೂ ಬರೆದಿದ್ದಾರೆ. ರಾಜೇಶ್ ಆನಂದ್ ಲೀಲಾ ನಿರ್ದೇಶನದ ಡಾ.56ನಲ್ಲಿ ರಮೇಶ್ ಭಟ್, ಯತಿರಾಜ್, ವೀಣಾ ಪೊನ್ನಪ್ಪ, ದೀಪಕ್ ಶೆಟ್ಟಿ ಮುಂತಾದವರು ಪ್ರಿಯಾಮಣಿಗೆ ಜೊತೆಯಾಗಿ ನಟಿಸಿದ್ದಾರೆ. ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡಿರೋ ಡಾ.56 ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮೂಲಕವೇ ಪ್ರವೀಣ್ ರೆಡ್ಡಿ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಮೋಷನ್ ಪೋಸ್ಟರ್ ಮೂಲಕವೇ ಅವರ ಪಾತ್ರದ ಖದರ್ ಕೂಡಾ ಅನಾವರಣಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *