ಕೆಜಿಎಫ್ ಅಭಿಮಾನಿಗಳಿಗೆ ಧಮಾಕೆದಾರ್ ಸುದ್ದಿ

Public TV
2 Min Read

ಬೆಂಗಳೂರು: ಇಡೀ ಭಾರತೀಯ ಸಿನಿ ಅಂಗಳದಲ್ಲಿ ಕೆಜಿಎಫ್ ಧ್ಯಾನ ಆರಂಭವಾಗಿದೆ. ಚಿತ್ರ ತೆರೆಮೇಲೆ ಬರೋದನ್ನು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರದ ಒಂದು ಟೀಸರ್, ಎರಡು ಟ್ರೇಲರ್ ಮತ್ತು ಒಂದು ಲಿರಿಕಲ್ ಹಾಡಿನ ವಿಡಿಯೋ ರಿಲೀಸ್ ಆಗಿದೆ. ಈ ಎಲ್ಲ ವಿಡಿಯೋ ನೋಡಿದವ್ರು ಸಿನಿಮಾ ಯಾವಾಗ ಬರುತ್ತೆ ಅಂತಾ ಕಾಯುತ್ತಿದ್ದಾರೆ. ಇಂದು ಸಂಜೆ 7 ಗಂಟೆಗೆ ಚಿತ್ರದ ಮತ್ತೊಂದು ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ.

ಈ ಸಂಬಂದ ಲಹರಿ ಮ್ಯೂಸಿಕ್ ಸಂಸ್ಥೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ. ಈ ಮೊದಲು ಪವರ್ ಹುಡುಕಿ ಹೊರಟ ಕೋಲಾರದ ಹುಡುಗ ಹೇಗೆ ಮುಂಬೈ ಭೂಗತ ಲೋಕದ ನಾಯಕನಾಗಿ ‘ಎಲ್ಲರಿಂದಲೂ ರಾಕಿ ಭಾಯ್’ ಅಂತಾ ಕರೆಸಿಕೊಳ್ಳುತ್ತಾನೆ ಎಂಬುದನ್ನು ತೋರಿಸಲಾಗಿತ್ತು. ಈ ಹಾಡಿನ ಸಾಲುಗಳು ಮಾಸ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಸೆಂಟಿಮೆಂಟ್ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲು ಚಿತ್ರತಂಡ ಪ್ರಯತ್ನ ಮಾಡುತ್ತಿದೆ.

ತಾಯಿ ಮತ್ತು ಮಗನ ಸಂಬಂಧವನ್ನು ಹೇಳುವ ‘ಗರ್ಭದಿ’ ಹಾಡು ರಿಲೀಸ್ ಆಗಲಿದೆ. ಹಾಡಿನ ಸಾಹಿತ್ಯ ಸಂಪೂರ್ಣ ಮಗನಿಗಾಗಿ ಕಾಯುತ್ತಿರುವ ತಾಯಿ, ಅಮ್ಮನ ಪ್ರೀತಿ ಹುಡುಕುವ ಮಗನ ಬಗ್ಗೆ ಹೇಳುವ ಪದಪುಂಜವನ್ನು ಒಳಗೊಂಡಿದೆಯಂತೆ. ಅಮ್ಮನ ಪ್ರೀತಿಗಾಗಿ ಹಾತೊರೆಯುತ್ತಿರುವ ಮಗ, ಪುತ್ರನ ಬರುವಿಕೆಗಾಗಿ ಶಬರಿಯಂತೆ ಕಾಯುವ ತಾಯಿ ಎಲ್ಲವನ್ನು ಈ ಹಾಡು ವರ್ಣನೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಇವತ್ತು ಹೈದರಾಬಾದ್ ನಲ್ಲಿ ಕೆಜಿಎಫ್ ಚಿತ್ರದ ವಿಶೇಷ ಅದ್ಧೂರಿ ಕಾರ್ಯಕ್ರಮ ಸಂಜೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೆಜಿಎಫ್ ಚಿತ್ರತಂಡ ಸೇರಿದಂತೆ ಬಾಹುಬಲಿ ನಿರ್ದೇಶಕ ರಾಜಮೌಳಿ ಭಾಗಿಯಾಗಲಿದ್ದಾರೆ. ಟಾಲಿವುಡ್ ನ ಇತರೆ ಕಲಾವಿದರು ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಈ ವೇಳೆ ಕೆಜಿಎಫ್ ಚಿತ್ರೀಕರಣದ ಹೊಸ ಮಾಹಿತಿಗಳನ್ನು ಚಿತ್ರತಂಡ ಹೊರಹಾಕಲಿದೆಯಂತೆ.

ಇಂದು ಯಶ್ ಮತ್ತು ರಾಧಿಕಾ ಪಂಡಿತ್ ಎರಡನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಡಿಸೆಂಬರ್ 2ರಂದು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಪತ್ನಿ ರಾಧಿಕಾರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಎರಡು ವರ್ಷದ ಹಿಂದೆ ಸಂಪ್ರದಾಯಬದ್ಧವಾಗಿ ಸಂಗಾತಿಯಾಗಿ ರಾಧಿಕಾ ಅವರು ಯಶ್ ಗೃಹ ಪ್ರವೇಶ ಮಾಡಿದ್ದರು. ಇಂದು ಅದೇ ಶುಭ ಗಳಿಗೆಯಲ್ಲಿ ಪುತ್ರಿ ಗೃಹ ಪ್ರವೇಶ ಮಾಡುತ್ತಿರೋದು ಮತ್ತೊಂದು ವಿಶೇಷತೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *