ದೋಸೆ ಮಾಡುವಾತ ಲಕ್ಷಾಂತರ ರೂಪಾಯಿ ವಂಚನೆ-ಕಡಬದಿಂದ ಮೈಸೂರಿಗೆ ಪರಾರಿ

Public TV
2 Min Read

– ಪತ್ತೆಗೆ ಬಲೆ ಬೀಸಿದ ಪೊಲೀಸರು

ಮಂಗಳೂರು: ಕಡಬದ ಹೋಟೆಲ್ ಒಂದರಲ್ಲಿ ದೋಸೆ ಸ್ಪೆಷಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೈಸೂರು ಮೂಲದ ಯುವಕನೋರ್ವ ಕಡಬದ ಹಲವರಿಗೆ ವಂಚಿಸಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕಡಬ ಹಲವರಿಗೆ ಟೋಪಿ ಹಾಕಿ ದೋಖಾ ಎಸಗಿರುವ ವಂಚಕನನ್ನು ಮೈಸೂರಿನ ಹಾರನಹಳ್ಳಿಯ ನಿವಾಸಿ ಶರತ್ ಬಾಬು (30) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಕಡಬದಲ್ಲಿ ಪ್ರಾರಂಭವಾದ ಹೋಟೇಲ್ ಒಂದರಲ್ಲಿ ದೋಸೆ ಮಾಡುವ ಕೆಲಸಕ್ಕೆ ಸೇರಿ ಎರಡು ತಿಂಗಳು ಆಗುವಷ್ಟರಲ್ಲೇ ತನ್ನ ಮಾತಿನ ಮೋಡಿಯಿಂದ ಹಲವರನ್ನು ಬುಟ್ಟಿಗೆ ಹಾಕಿಕೊಂಡು ಅವರಿಂದ ನಗದು ಹಾಗೂ ಇತರ ಸ್ವತ್ತುಗಳನ್ನು ಪಡೆದು ರಾತ್ರಿ ಬೆಳಗಾಗುವುದರೊಳಗೆ ಪರಾರಿಯಾಗಿದ್ದಾನೆ.

ಕಡಬದ ಎಲೆಕ್ಟ್ರಾನಿಕ್ಸ್ ಸಂಸ್ಥೆಯೊಂದರಿಂದ ಒಂದು ಲ್ಯಾಪ್‍ಟ್ಯಾಪ್, ಕಲರ್ ಟಿವಿ, ಹೋಮ್ ಥಿಯೇಟರ್ ಹೀಗೆ ಒಟ್ಟು 45 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ಪಡೆದುಕೊಂಡಿದ್ದ. ಇನ್ನೊಂದು ಎಲೆಕ್ಟ್ರಾನಿಕ್ಸ್ ಸಂಸ್ಥೆಯಿಂದ 13 ಸಾವಿರ ರೂ ನ ವಸ್ತುಗಳನ್ನು ಪಡೆದಿದ್ದನು. ಆತ ಕೆಲಸ ಮಾಡುತ್ತಿದ್ದ ಹೋಟೆಲ್‍ನ ಬಳಿ ಸರ್ವಿಸ್ ಸ್ಟೇಷನ್ ನಡೆಸುತ್ತಿರುವ ವ್ಯಕ್ತಿಯೊಬ್ಬರಿಂದ 6,500 ರೂ. ನಗದು, ಇನ್ನೊಬ್ಬ ವ್ಯಕ್ತಿಯಿಂದ 2,000 ರೂ. ನಗದು, ಕಡಬದ ತರಕಾರಿ ವ್ಯಾಪಾರಿಯೊಬ್ಬರಿಂದ 35,000 ರೂ. ನಗದು, ಜಿನಸು ವ್ಯಾಪಾಸ್ಥರೊಬ್ಬರಿಂದ 60,000 ರೂ. ನಗದು, ಆತನೊಟ್ಟಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ ರೂ. 16,000 ನಗದು ಪಡೆದಿದ್ದ.

ಅಷ್ಟೇ ಅಲ್ಲ ವ್ಯಕ್ತಿಯೊಬ್ಬರಿಂದ ಮತ್ತೊಬ್ಬ ವ್ಯಕ್ತಿಯ ಚಿನ್ನದ ಸರವನ್ನೂ ಪಡೆದಿದ್ದ. ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಇತರ ವಸ್ತುಗಳೊಂದಿಗೆ ಇದೀಗ ಆರೋಪಿ ನಾಪತ್ತೆಯಾಗಿದ್ದಾನೆ. ತಾನು ಮೈಸೂರಿನಿಂದ ಬಿಳಿ ಅಕ್ಕಿ ತರಿಸಿಕೊಡುವುದಾಗಿ ಕೆಲವರಿಗೆ ವಂಚಿಸಿದ್ದಾನೆ. ಮತ್ತೆ ಕೆಲವರಿಗೆ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಮೋಸ ಮಾಡಿದ್ದಾನೆ. ಇನ್ನೂ ಕೆಲವರಿಗೆ ನಾಳೆ ಹಣ ವಾಪಸ್ ಮಾಡುವುದಾಗಿ ನಾಮ ಹಾಕಿದ್ದಾನೆ. ಮತ್ತೆ ಕೆಲವರಿಗೆ ತಿಂಗಳ ಸಂಬಳವಾದಾಗ ಮರು ಪಾವತಿ ಮಾಡುವುದಾಗಿ ಹೇಳಿ ಈ ಆಸಾಮಿ ಯಾಮಾರಿಸಿದ್ದಾನೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಸಂಜನಾ, ರಾಗಿಣಿ ದ್ವಿವೇದಿಗೆ ಸಂಕಷ್ಟ

ಇಲ್ಲಿನ ಶೋ ರೂಮ್ ಒಂದರಲ್ಲಿ 45,000 ರೂ. ಡೌನ್ ಪೇಮೆಂಟ್ ಮಾಡಿ ಎರಡು ಲಕ್ಷ ರೂ. ಮೌಲ್ಯದ ಬೈಕ್ ಒಂದನ್ನು ಖರೀದಿಸಿ ರಾತ್ರೋರಾತ್ರಿ ಕಡಬದಿಂದ ಕಾಲ್ಕಿತ್ತಿದ್ದಾನೆ. ಕಡಬದ ಮೊಬೈಲ್ ಶೋ ರೂಮ್ ಒಂದರಿಂದ 40,000 ರೂ. ಮೌಲ್ಯದ ಮೊಬೈಲ್ ಒಂದನ್ನು ಸಾಲದ ರೂಪದಲ್ಲಿ ಪಡೆಯಲು ಯತ್ನಿಸಿ ವಿಫಲನಾಗಿದ್ದ ಎಂದು ತಿಳಿದುಬಂದಿದೆ. ಹೋಟೆಲ್‍ನ ಪಕ್ಕದಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಶರತ್ ಬಾಬು, ಹೋಟೆಲ್‍ನಲ್ಲಿ ಇದ್ದುಕೊಂಡೇ ಇಲ್ಲಿನ ಹಲವು ಉದ್ಯಮಿಗಳ ವಿಶ್ವಾಸ ಸಂಪಾದಿಸಿ ದೋಖಾ ಎಸಗಿದ್ದಾನೆ. ಇದೀಗ ಮನೆಗೆ ಬೀಗ ಹಾಕಲಾಗಿದೆ. ಇದನ್ನೂ ಓದಿ: ಕಾಮಗಾರಿ ವೀಡಿಯೋ ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ: ಪ್ರತಾಪ್ ಸಿಂಹ ತಿರುಗೇಟು

ಹಣ, ಸ್ವತ್ತುಗಳನ್ನು ಕಳೆದುಕೊಂಡ ಸಂತ್ರಸ್ತರು ಮೈಸೂರಿನಲ್ಲಿರುವ ಅವನ ಮನೆಗೆ ಹೋಗಿ ವಿಚಾರಿಸಿದರೆ, ಆತ ಮನೆಗೆ ಬಾರದೆ ಒಂಬತ್ತು ವರ್ಷಗಳಾಗಿವೆ ಎಂದು ಆತನ ವೃದ್ಧ ತಂದೆಯಿಂದ ಉತ್ತರ ದೊರೆತಿದೆ ಎನ್ನಲಾಗಿದೆ ಈ ಬಗ್ಗೆ ಈ ತನಕ ಯಾವುದೇ ದೂರುಗಳು ದಾಖಲಾಗಿಲ್ಲ ಎನ್ನಲಾಗಿದೆ. ಆದರೂ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬಿಜೆಪಿಯನ್ನ ಮೆಚ್ಚಿಸಲು ಕಾಂಗ್ರೆಸ್ ನಾಯಕರನ್ನು ಸಿ.ಟಿ ರವಿ, ಯತ್ನಾಳ್ ಬೈಯುತ್ತಿದ್ದಾರೆ: ಶ್ರೀನಿವಾಸ್ ಬಿ.ವಿ.

Share This Article
Leave a Comment

Leave a Reply

Your email address will not be published. Required fields are marked *