ಈದ್ ಅಲ್-ಅಧಾ ಹಬ್ಬಕ್ಕೆ ಗೋವನ್ನು ಬಲಿ ಕೊಡಬೇಡಿ- ತೆಲಂಗಾಣ ಸಚಿವರಿಂದ ಮನವಿ

Public TV
2 Min Read

ಹೈದರಾಬಾದ್: ಬಕ್ರೀದ್ ಎಂದು ಜನಪ್ರಿಯವಾಗಿರುವ ಈದ್ ಅಲ್-ಅಧಾ ಹಬ್ಬದಲ್ಲಿ ಗೋವುಗಳನ್ನು ಬಲಿ ಕೊಡಬೇಡಿ ಎಂದು ತೆಲಂಗಾಣ ಗೃಹ ಸಚಿವ ಮಹಮೂದ್ ಅಲಿ ಅವರು ಮುಸ್ಲಿಂ ಬಾಂಧವರ ಬಳಿ ಮನವಿ ಮಾಡಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸದಸ್ಯತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ನಿರ್ದಿಷ್ಟ ಸಮುದಾಯದ ಜನರು ಗೋವುಗಳನ್ನು ಪೂಜಿಸುತ್ತಾರೆ. ಅವರ ನಂಬಿಕೆಯನ್ನು ನಾವು ಗೌರವಿಸಬೇಕು. ಹೀಗಾಗಿ ಬಕ್ರೀದ್ ಸಮಯದಲ್ಲಿ ಗೋವುಗಳನ್ನು ಬಲಿ ಕೊಡಬೇಡಿ ಎಂದು ಮುಸ್ಲಿಂ ಬಾಂಧವರ ಬಳಿ ಕೇಳಿಕೊಂಡರು.

ನಾನು ಎಲ್ಲಾ ಮುಸ್ಲಿಂ ಸಹೋದರರಿಗೆ ಗೋವುಗಳ ಬಲಿ ಕೊಡುವುದನ್ನು ತಪ್ಪಿಸಬೇಕೆಂದು ಮನವಿ ಮಾಡುತ್ತೇನೆ. ಹಸುವನ್ನು ಒಂದು ಧರ್ಮದಲ್ಲಿ ಗೌರವಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ಮುಸ್ಲಿಂ ಬಾಂಧವರು ಗೋವುಗಳ ಬದಲಿಗೆ ಆಡು ಮತ್ತು ಇತರೆ ಸಣ್ಣ ಪ್ರಾಣಿಗಳನ್ನು ಹಬ್ಬದಲ್ಲಿ ಬಲಿ ಕೊಡಲು ಬಳಸಬಹುದು ಎಂದು ಅಲಿ ಅವರು ಸಲಹೆ ನೀಡಿದರು.

ಈ ವೇಳೆ ಹೈದರಾಬಾದ್‍ನ ಐತಿಹಾಸಿಕ ಸ್ಥಳವಾದ ಚಾರ್ಮಿನಾರ್ ರನ್ನು ಉಲ್ಲೇಖಿಸಿ, ಈ ಸ್ಮಾರಕವು ನಮ್ಮ ಪೂರ್ವಜರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಚಾರ್ಮಿನಾರ್ ನ ನಾಲ್ಕು ಸ್ತಂಭಗಳು ಹಿಂದೂ, ಇಸ್ಲಾಂ, ಸಿಖ್ ಮತ್ತು ಕ್ರಿಶ್ಚಿಯನ್ ನಾಲ್ಕು ಧರ್ಮವನ್ನು ಪ್ರತಿನಿಧಿಸುತ್ತದೆ. ಜನರ ನಂಬಿಕೆಯನ್ನು ಒಗ್ಗುಡಿಸುವ ಉದ್ದೇಶದಿಂದ ಮೊಹಮ್ಮದ್ ಕುಲಿ ಕುತುಬ್ ಶಾಹಿ ಚಾರ್ಮಿನಾರ್ ನಿರ್ಮಿಸಿದ್ದಾರೆ ಎಂದರು.

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಕೂಡ ಶಾಹಿಯ ರೀತಿಯೇ ಯೋಚಿಸುತ್ತಾರೆ. ಶಾಹಿಯ ನಂತರ, ಎಲ್ಲಾ ಜನರನ್ನು ಒಗ್ಗೂಡಿಸಿ ಇರಿಸುವ ನಂಬಿಕೆಯನ್ನು ಹೊಂದಿರುವ ನಾಯಕರಿದ್ದಾರೆ ಎಂದರೆ, ಅವರೇ ನಮ್ಮ ಸಿಎಂ ಕೆ.ಸಿ ರಾವ್ ಎಂದು ಹಾಡಿ ಹೊಗಳಿದರು.

ಈ ಬಾರಿ ಬಕ್ರೀದ್ ಹಬ್ಬವನ್ನು ಆಗಸ್ಟ್ 11ರಂದು ಆಚರಿಸಲಾಗುತ್ತಿದ್ದು, ಹಬ್ಬದಲ್ಲಿ ಪ್ರಾಣಿ ಬಲಿ ನೀಡುವುದು ಸಂಪ್ರದಾಯವಾಗಿದೆ. ಹೀಗಾಗಿ ಬಕ್ರೀದ್ ಹಬ್ಬಕ್ಕೆ ಗೋವುಗಳನ್ನು ಬಲಿ ನೀಡುವವರ ವಿರುದ್ಧ ಕಾನೂನಿನ ತನ್ನ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಅಲ್ಲದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲಿ ಪೊಲೀಸರು ಜಾಗರೂಕರಾಗಿದ್ದಾರೆ. ಕಳೆದ ಬಾರಿ ಎಲ್ಲಾ ಸಾರಿಗೆ ವಾಹನಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದರು. ಆದ್ದರಿಂದ ಗೋವುಗಳ ಬಲಿ ಪಡೆಯಬೇಡಿ ಎಂದು ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *