ದುಬಾರಿ ಬಜೆಟ್, ಸ್ಟಾರ್ ನಟರು ಇಲ್ಲದೇ ಸಿನಿಮಾ ಗೆಲ್ಲಿಸಬಹುದು ಎನ್ನುವುದಕ್ಕೆ ಸು ಫ್ರಂ ಸೋ ಸಿನಿಮಾ ಸಾಕ್ಷಿ ಎಂದಿದ್ದಾರೆ ನಟಿ ರಮ್ಯಾ. ದರ್ಶನ್ ರೀತಿಯ ಸ್ಟಾರ್ ನಟರು ಜೈಲಿಗೆ ಹೋದಾಗ, ಸಿನಿಮಾ ರಂಗ ಪಾತಾಳಕ್ಕೆ ಬೀಳುತ್ತದೆ. ಸ್ಟಾರ್ ನಟರು ಸಿನಿಮಾ ಮಾಡದೇ ಇದ್ದರೆ ಸಿನಿಮಾ ರಂಗಕ್ಕೆ ನಷ್ಟಕ್ಕೆ ತಿರುಗುತ್ತಾ? ಎಂದು ಕೇಳಲಾದ ಪ್ರಶ್ನೆಗೆ ರಮ್ಯಾ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಸು ಫ್ರಂ ಸೋನಲ್ಲಿ ಯಾವ ಸ್ಟಾರ್ ನಟರು ಇದ್ದಾರೆ?.. ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಅಂದಿದ್ದಾರೆ ರಮ್ಯಾ.
ದರ್ಶನ್ ಬಗ್ಗೆ ರಮ್ಯಾ ಹೇಳಿದ್ದೇನು?
ದರ್ಶನ್ (Darshan) ಲೈಟ್ಬಾಯ್ ಆಗಿ ಬಂದ್ರೂ ಕಷ್ಟಪಟ್ಟು ಮೇಲೆ ಬಂದಿದ್ರು. ಆದ್ರೆ ಜೀವನ ಹಾಳುಮಾಡಿಕೊಂಡ್ರು ಅಂತ ನಟಿ ರಮ್ಯಾ (Actress Ramya) ಕೊಲೆ ಆರೋಪಿ ದಚ್ಚು ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದಾರೆ. ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೀನಿ. ದೂರು ಕೊಟ್ಮೇಲೆ ಬ್ಯಾಡ್ ಕಾಮೆಂಟ್ಸ್ ಬರ್ತಿಲ್ಲ. ಎಷ್ಟೋ ಜನ ಪೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದವರಾಗಿದ್ದರೂ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ರು. ಆದ್ರೆ ಜೀವನ ಹಾಳು ಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳಿಯಬಹುದಿತ್ತು ಎಂದರಲ್ಲದೇ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುವುದಾಗಿ ಹೇಳಿದರು.
ಮುಂದುವರಿದು… ಸುಪ್ರೀಂ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ. ಎಲ್ಲ ಒಳ್ಳೆಯದಾಗಿದೆ ಅಂದುಕೊಳ್ತೀನಿ ಅಂತ ಹೇಳಿದ್ದಾರೆ. ಇನ್ನೂ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಜವಾಬ್ದಾರಿ ಹೊತ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಡೆಯನ್ನು ಸ್ವಾಗತಿಸುತ್ತೀನಿ ಅಂದರು. ಇದು ಒಳ್ಳೆ ಬೆಳವಣಿಗೆ, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಈ ಮೂಲಕ ಒಳ್ಳೆ ಸಂದೇಶ ಕೊಡಬಹುದು. ಅವರು ಸಹ ಹೆಣ್ಣು, ಹೀಗಾಗಿ ಇದು ಒಳ್ಳೆ ಬೆಳವಣಿಗೆ ಅಂತಿನಿ ಅಂದರು.