ಚೀನಾ ನಮ್ಮ ಶತ್ರು ದೇಶವಲ್ಲ: ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ

Public TV
3 Min Read

ನವದೆಹಲಿ: ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ (Chairman of Indian Overseas Congress) ಮತ್ತು ರಾಹುಲ್ ಗಾಂಧಿಯವರ (Rahul Gandhi) ಆಪ್ತ ಸಹಾಯಕ ಸ್ಯಾಮ್ ಪಿತ್ರೋಡಾ (Sam Pitroda) ಅವರು ಚೀನಾ ನಮ್ಮ ಶತ್ರು ದೇಶ ಅಲ್ಲ ಎಂದು ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಅವರು, ಚೀನಾದಿಂದ (China) ಬರುವ ಬೆದರಿಕೆ ನನಗೆ ಅರ್ಥವಾಗುತ್ತಿಲ್ಲ. ಅಮೆರಿಕವು (USA) ಶತ್ರುವನ್ನು ವ್ಯಾಖ್ಯಾನಿಸುವ ಪ್ರವೃತ್ತಿಯನ್ನು ಹೊಂದಿರುವುದರಿಂದ ಈ ವಿಷಯ ಚರ್ಚೆ ಆಗುತ್ತಿದೆ. ಎಲ್ಲಾ ರಾಷ್ಟ್ರಗಳು ಎದುರಿಸುವ ಬದಲು ಸಹಕರಿಸುವ ಸಮಯ ಬಂದಿದೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.

ನಾವು ಮೊದಲಿನಿಂದಲೂ ಮುಖಾಮುಖಿಯಾಗಿದ್ದೇವೆ. ಈ ಮನೋಭಾವವು ಶತ್ರುಗಳನ್ನು ಸೃಷ್ಟಿಸುತ್ತದೆ ಮತ್ತು ದೇಶದೊಳಗೆ ಬೆಂಬಲವನ್ನು ಗಳಿಸುತ್ತದೆ. ನಾವು ಈ ಮನಸ್ಥಿತಿಯನ್ನು ಬದಲಾಯಿಸಬೇಕು. ಮೊದಲ ದಿನದಿಂದಲೂ ಚೀನಾವನ್ನು ಶತ್ರು ಎಂದು ಭಾವಿಸುವುದು ನ್ಯಾಯಯುತವಲ್ಲ, ಚೀನಾಕ್ಕೆ ಮಾತ್ರವಲ್ಲ, ಯಾರಿಗೂ ನ್ಯಾಯಯುತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

ಲೋಕಸಭ ಚುನಾವಣೆಯ ಸಮಯದಲ್ಲಿ ಜನಾಂಗೀಯ ನಿಂದನೆ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಕ್ಕೆ ಸ್ಯಾಮ್ ಪಿತ್ರೋಡಾ ಅವರನ್ನು ಆ ಹುದ್ದೆಯಿಂದ ಕಿತ್ತು ಹಾಕಲಾಗಿತ್ತು. ಆದರೆ ಕಳೆದ ವರ್ಷದ ಜೂನ್‌ನಲ್ಲಿ ಮತ್ತೆ ಅವರಿಗೆ ಕಾಂಗ್ರೆಸ್‌ ಆ ಹುದ್ದೆಯನ್ನು ನೀಡಿತ್ತು.  ಇದನ್ನೂ ಓದಿ: ಉಡುಪಿ| ಹಳಿಯ ಕಬ್ಬಿಣ ಕದ್ದ ಬಾಲಕರಿಗೆ ಥಳಿಸಿದ್ದಕ್ಕೆ ರೈಲ್ವೇ ಸಿಬ್ಬಂದಿ ಮೇಲೆ ಕೇಸ್‌

ಲೋಕಸಭಾ ಚುನಾವಣೆ (Lok Sabha Election) ಸಮಯದಲ್ಲೇ ಪಿತ್ರಾರ್ಜಿತ ಆಸ್ತಿ ಮರು ಹಂಚಿಕೆ (Wealth Redistribution) ಮತ್ತು ಈಗ ಭಾರತೀಯರ ಬಣ್ಣದ ಬಗ್ಗೆ ಜನಾಂಗೀಯ ನಿಂದನೆ (Racist Remark) ಬಗ್ಗೆ ಮಾತನಾಡಿ ವಿವಾದ ಹುಟ್ಟು ಹಾಕಿ ಕಾಂಗ್ರೆಸ್‌ ಪಕ್ಷಕ್ಕೆ ಪಿತ್ರೋಡಾ ಮುಜುಗರ ತಂದಿದ್ದರು.

ಪಿತ್ರೋಡಾ ಹೇಳಿದ್ದೇನು?
ಭಾರತದ ಪೂರ್ವದ ಜನರು ಚೀನಿಯರಂತೆ, ಪಶ್ಚಿಮದ ಜನರು ಅರಬ್ಬರಂತೆ ಕಾಣಿಸುತ್ತಾರೆ. ಉತ್ತರ ಭಾರತದವರು ಬಹುಶಃ ಬಿಳಿಯರಂತೆ ಕಂಡರೆ, ದಕ್ಷಿಣ ಭಾರತದ ಜನ ಆಫ್ರಿಕನ್ನರಂತೆ ಕಾಣಿಸುತ್ತಾರೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಮಾತ್ರ ಎಲ್ಲರನ್ನೂ ಒಟ್ಟಿಗೆ ನೋಡಲು ಸಾಧ್ಯ. ನಾವೆಲ್ಲರೂ ಸಹೋದರ -ಸೋದರಿಯರಂತೆ ಜೀವಿಸುತ್ತಿದ್ದೇವೆ.

ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದಲ್ಲಿ ಬೇರೂರಿರುವ ಭಾರತದ ಮೂಲಭೂತ ತತ್ವಗಳು ಪ್ರಸ್ತುತ ಸವಾಲಿನಲ್ಲಿದೆ. ಈಗ ಭಾರತ ರಾಮ ನವಮಿ, ರಾಮ ಮಂದಿರದಿಂದ ಸವಾಲನ್ನು ಎದುರಿಸುತ್ತಿದೆ. ಸದಾಕಾಲ ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಒಬ್ಬ ಭಾರತೀಯ ನಾಯಕನಂತೆ ಮಾತನಾಡದೇ ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿದ್ದಾರೆ.

ಅಮೆರಿಕದಲ್ಲಿ ವ್ಯಕ್ತಿಯೊಬ್ಬ 100 ಮಿಲಿಯನ್‌ ಡಾಲರ್‌ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಆತನ 45 ಪ್ರತಿಶತ ಸಂಪತ್ತು ಮಕ್ಕಳಿಗೆ ವರ್ಗಾವಣೆಯಾಗುತ್ತದೆ. 55% ಸಂಪತ್ತು ಸರ್ಕಾರಕ್ಕೆ ಹೋಗುತ್ತದೆ. ಇದೊಂದು ಆಸಕ್ತಿದಾಯಕ ಕಾನೂನು. ಈ ರೀತಿಯ ಯಾವುದೇ ಕಾನೂನು ಭಾರತದಲ್ಲಿ ಇಲ್ಲ. ಯಾರಾದರೂ 10 ಶತಕೋಟಿ ಮೌಲ್ಯದವರು ಮೃತಪಟ್ಟರೆ ಅವರ ಮಕ್ಕಳು 10 ಶತಕೋಟಿ ಪಡೆಯುತ್ತಾರೆ ಮತ್ತು ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಈ ರೀತಿಯ ವಿಷಯಗಳ ಬಗ್ಗೆ ಜನರು ಚರ್ಚಿಸಬೇಕು. ಕಾಂಗ್ರೆಸ್ ಪಕ್ಷವು ಸಂಪತ್ತಿನ ಹಂಚಿಕೆಯನ್ನು ಉತ್ತಮಗೊಳಿಸುವ ನೀತಿಯನ್ನು ರೂಪಿಸುತ್ತದೆ ಎಂದಿದ್ದರು.

 

Share This Article