ಸೋಮಣ್ಣಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡದಂತೆ ರಸ್ತೆ ತಡೆದು ಆಕ್ರೋಶ

Public TV
1 Min Read

– ಮಾಧುಸ್ವಾಮಿ ಅಭಿಮಾನಿಯಿಂದ ಪೆಟ್ರೋಲ್ ಸುರಿದುಕೊಂಡು ಹೈಡ್ರಾಮಾ

ತುಮಕೂರು: ಮಾಜಿ ಸಚಿವ ವಿ.ಸೋಮಣ್ಣಗೆ (V.Somanna) ಟಿಕೆಟ್ ಕೊಡದಂತೆ ಜಿಲ್ಲೆಯ ನಾಲ್ಕು ತಾಲೂಕಿನ ಬಿಜೆಪಿ (BJP) ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ತುರುವೇಕೆರೆ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ತಿಪಟೂರು ತಾಲೂಕಿನ ಕೆ.ಬಿ ಕ್ರಾಸ್‍ನಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತುಮಕೂರು ಜಿಲ್ಲೆಗೆ ವಿ.ಸೋಮಣ್ಣಗೆ ಕೊಡುಗೆ ಏನೂ ಇಲ್ಲ. ಇದೇ ಕಾರಣಕ್ಕೆ ಸೋಮಣ್ಣಗೆ ಟಿಕೆಟ್ ಕೊಡಬಾರದು. ಸೋಮಣ್ಣ ಬದಲು ಜೆ.ಸಿ ಮಾಧುಸ್ವಾಮಿಗೆ (J.C. Madhu Swamy) ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿ ರಸ್ತೆ ತಡೆದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ: ಟಿಎಂಸಿ ನಾಯಕ ಟೀಕೆ

ಕ್ಷೇತ್ರಕ್ಕೆ ವಲಸೆ ಬರುವ ವಿ.ಸೋಮಣ್ಣಗೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ. ಅವರು ಬಂದರೆ ತುಮಕೂರು ಜಿಲ್ಲೆಗೆ ಗ್ರಹಣ ಹಿಡಿಯುತ್ತದೆ. ಸೋಮಣ್ಣ ರಾಜಕೀಯ ಆಕ್ರಮಣ ಮಾಡುತ್ತಾರೆ. ಇದರಿಂದ ಜಿಲ್ಲೆಯ ಜನ ವನವಾಸ ಬೀಳಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸಂಸದ ಜಿ.ಎಸ್ ಬಸವರಾಜು ಅವರಿಗೆ ಧಿಕ್ಕಾರ ಕೂಗಿ, ಗೋ ಬ್ಯಾಕ್ ಸೋಮಣ್ಣ ಎಂದು ಘೋಷಣೆ ಕೂಗಿದ್ದಾರೆ. ಕೆ.ಬಿ.ಕ್ರಾಸ್ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಸೋಮಣ್ಣ ಅವರಿಗೆ ಟಿಕೆಟ್ ಕೊಡದಂತೆ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದೇ ವೇಳೆ ಮಾಧುಸ್ವಾಮಿ ಅಭಿಮಾನಿಯೊಬ್ಬ, ಅವರಿಗೆ ಟಿಕೆಟ್ ಕೊಡುವಂತೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಹೈಡ್ರಾಮಾ ಸೃಷ್ಟಿಸಿದ ಘಟನೆಯೂ ನಡೆಯಿತು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ; ಕ್ಷೇತ್ರಕ್ಕೆ ಬನ್ನಿ ಎಂಬ ಒತ್ತಾಯ ತಿರಸ್ಕರಿಸಿದ ಹೆಚ್ಡಿಕೆ, ನಿಖಿಲ್

Share This Article