ಚೀನಾ ಜೊತೆ ವ್ಯಾಪಾರ ಒಪ್ಪಂದ; ಕೆನಡಾಗೆ 100% ಸುಂಕ ವಿಧಿಸುವುದಾಗಿ ಟ್ರಂಪ್‌ ಬೆದರಿಕೆ

2 Min Read

ವಾಷಿಂಗ್ಟನ್‌: ಚೀನಾದೊಂದಿಗಿನ ವ್ಯಾಪಾರ ಒಪ್ಪಂದವನ್ನು ಮುಂದುವರಿಸಿದರೆ ಕೆನಡಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ 100% ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ಟ್ರಂಪ್, ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿಯನ್ನು ಟೀಕಿಸಿದ್ದಾರೆ. ಚೀನಾವು ಅಮೆರಿಕಕ್ಕೆ ಸರಕು ಮತ್ತು ಉತ್ಪನ್ನಗಳನ್ನು ಕಳುಹಿಸಲು ಕೆನಡಾವನ್ನು ಡ್ರಾಪ್ ಆಫ್ ಪೋರ್ಟ್ ಆಗಿ ಮಾಡಲಿದ್ದೇನೆ ಎಂದು ಅವರು ಭಾವಿಸಿದರೆ ಅದು ತಪ್ಪು ಕಲ್ಪನೆ ಎಂದು ಟಾಂಗ್‌ ಕೊಟ್ಟಿದ್ದಾರೆ.

ಚೀನಾ ಜೊತೆ ಕೆನಡಾ ಒಪ್ಪಂದ ಮಾಡಿಕೊಂಡರೆ, ಅಮೆರಿಕಕ್ಕೆ ಬರುವ ಎಲ್ಲಾ ಕೆನಡಾದ ಸರಕುಗಳು ಮತ್ತು ಉತ್ಪನ್ನಗಳ ಮೇಲೆ ತಕ್ಷಣವೇ 100% ಸುಂಕ ವಿಧಿಸಲಾಗುತ್ತದೆ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಚೀನಾ ಕೆನಡಾವನ್ನು ಜೀವಂತವಾಗಿ ತಿಂದು ಹಾಕುತ್ತದೆ. ಅದರ ವ್ಯವಹಾರಗಳು, ಸಾಮಾಜಿಕ ರಚನೆ ಮತ್ತು ಸಾಮಾನ್ಯ ಜೀವನ ವಿಧಾನವನ್ನು ನಾಶಪಡಿಸುವುದೂ ಸೇರಿದಂತೆ ಅದನ್ನು ಸಂಪೂರ್ಣವಾಗಿ ತಿಂದು ಹಾಕುತ್ತದೆ ಎಂದು ಟ್ರಂಪ್‌ ಗುಡುಗಿದ್ದಾರೆ.

‘ಹೊಸ ಕಾರ್ಯತಂತ್ರದ ಪಾಲುದಾರಿಕೆ’ಯ ಅಡಿಯಲ್ಲಿ ಚೀನಾದೊಂದಿಗೆ ಒಪ್ಪಂದದ ಮೂಲಕ ಕೆನಡಾವು ಅಮೆರಿಕದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ. ಕೆನಡಾ ಮತ್ತು ಚೀನಾ ವ್ಯಾಪಾರ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಸುಂಕಗಳನ್ನು ಕಡಿಮೆ ಮಾಡಲು ಪ್ರಾಥಮಿಕ ಆದರೂ, ಹೆಗ್ಗುರುತು ವ್ಯಾಪಾರ ಒಪ್ಪಂದವನ್ನು ತಲುಪಿವೆ ಎಂದು ಕಾರ್ನಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಒಪ್ಪಂದದ ಪ್ರಕಾರ, ಕೆನೋಲಾ ಬೀಜಗಳಿಗೆ ಕೆನಡಾದ ಅತಿದೊಡ್ಡ ಮಾರುಕಟ್ಟೆಯಾಗಿರುವ ಚೀನಾ, ಮಾರ್ಚ್ 1 ರ ವೇಳೆಗೆ ಕೆನೋಲಾ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ. 84 ರಿಂದ ಶೇ.15 ಕ್ಕೆ ಇಳಿಸಲಿದೆ. ಕೆನಡಾದ ಪ್ರವಾಸಿಗರಿಗೆ ವೀಸಾ ರಹಿತವಾಗಿ ದೇಶವನ್ನು ಪ್ರವೇಶಿಸಲು ಚೀನಾ ಅವಕಾಶ ನೀಡುತ್ತದೆ. ಪ್ರತಿಯಾಗಿ, ಕೆನಡಾ 49,000 ಚೀನೀ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಹೊಸ, ಶೇ.6.1 ರ ಆದ್ಯತೆಯ ಸುಂಕಗಳ ಅಡಿಯಲ್ಲಿ ಆಮದು ಮಾಡಿಕೊಳ್ಳುತ್ತದೆ.

ಅಮೆರಿಕದ ವಾರಂಟ್ ಮೇಲೆ ಕೆನಡಾದ ಅಧಿಕಾರಿಗಳು ಹುವಾವೇ ಸಂಸ್ಥಾಪಕರ ಮಗಳನ್ನು ಬಂಧಿಸಿದಾಗಿನಿಂದ ಚೀನಾ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದಕ್ಕೆ ಪ್ರತೀಕಾರವಾಗಿ ಚೀನಾ ಬೇಹುಗಾರಿಕೆ ಆರೋಪದ ಮೇಲೆ ಇಬ್ಬರು ಕೆನಡಿಯನ್ನರನ್ನು ಬಂಧಿಸಿತ್ತು.

Share This Article