ಭಾರತದ ಮೇಲೆ 50% ಸುಂಕ ವಿಧಿಸಿದ್ದು, ರಷ್ಯಾಗೆ ದೊಡ್ಡ ಹೊಡೆತ ಕೊಟ್ಟಿದೆ: ಟ್ರಂಪ್‌

Public TV
1 Min Read

– ನಾವು ಇಷ್ಟಕ್ಕೆ ನಿಲ್ಲಲ್ಲ: ಮತ್ತೆ ಎಚ್ಚರಿಕೆ ಕೊಟ್ಟ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಭಾರತದ (India) ಮೇಲೆ ಭಾರಿ ಪ್ರಮಾಣದಲ್ಲಿ ಸುಂಕ ವಿಧಿಸಿರುವುದು ರಷ್ಯಾದ (Russia) ಆರ್ಥಿಕತೆಗೆ ದೊಡ್ಡ ಹೊಡೆತ ಕೊಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್‌, ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ. ಹೀಗಾಗಿ, ಭಾರತದ ಮೇಲೆ ಅಮೆರಿಕ ಭಾರಿ ಸುಂಕ ವಿಧಿಸಿದೆ. ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ ಅಮೆರಿಕದ ಸುಂಕ ಹೇರಿಕೆಯಿಂದಾಗಿ ರಷ್ಯಾದ ಆರ್ಥಿಕತೆಯು ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುಂಕ ಸಮರದ ಬೆನ್ನಲ್ಲೇ ಮೋದಿಗೆ ಕರೆ ಮಾಡಿದ ಝೆಲೆನ್ಸ್ಕಿ

ರಷ್ಯಾ ಮತ್ತೆ ರೂಪುಗೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಅದೊಂದು ಬೃಹತ್ ದೇಶ. ರಷ್ಯಾದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪುಟಿನ್ ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ.‌ ಆದರೆ, ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರ ಆರ್ಥಿಕತೆಯು ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ತುಂಬಾ ತೊಂದರೆಗೀಡಾಗಿದೆ ಎಂದು ಮಾತನಾಡಿದ್ದಾರೆ.

ಬೇರೆ ಯಾರೂ ಇಷ್ಟೊಂದು ಕಠಿಣವಾಗಿರುತ್ತಿರಲಿಲ್ಲ. ನಾನು ಇಷ್ಟಕ್ಕೆ ನಿಲ್ಲುವುದಿಲ್ಲ ಎಂದು ಟ್ರಂಪ್‌ ಎಚ್ಚರಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ, ಭಾರತ ಮತ್ತು ರಷ್ಯಾದ ಆರ್ಥಿಕತೆಗಳು ಸತ್ತಿವೆ ಎಂದು ಟ್ರಂಪ್‌ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಟ್ರಂಪ್ ಸುಂಕ ಮೋದಿ ವಿದೇಶಾಂಗ ನೀತಿಯ ದುರಂತ: ಮಲ್ಲಿಕಾರ್ಜುನ ಖರ್ಗೆ ಆರೋಪ

ಅಮೆರಿಕವು ಭಾರತದ ಮೇಲೆ ಶೇ.25 ರಷ್ಟು ಪರಸ್ಪರ ಸುಂಕಗಳನ್ನು ವಿಧಿಸಿದೆ. ರಷ್ಯಾದ ತೈಲ ಖರೀದಿಸುವ ಕಾರಣಕ್ಕೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕವನ್ನು ಹೇರಿದೆ. ಇದರ ಪರಿಣಾಮವಾಗಿ ಒಟ್ಟು ಶೇ.50 ರಷ್ಟು ಸುಂಕಗಳು ಭಾರತದ ಮೇಲೆ ಬಿದ್ದಿವೆ.

ಸುಂಕಗಳು ಅಮೆರಿಕಕ್ಕೆ ಆದಾಯ ಗಳಿಸಲು ಮಾತ್ರವಲ್ಲದೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷ ಸೇರಿದಂತೆ ಐದು ಯುದ್ಧಗಳನ್ನು ಪರಿಹರಿಸಲು ಸಹಾಯ ಮಾಡಿದೆ ಎಂದು ಅಮೆರಿಕದ ನಾಯಕ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

Share This Article