ಹೌತಿ ಉಗ್ರರ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌, 31 ಬಲಿ – ನರಕ ತೋರಿಸ್ತೀವಿ ಎಂದು ಗುಡುಗಿದ ಟ್ರಂಪ್‌

Public TV
3 Min Read

– ಟ್ರಂಪ್‌ ಎರಡನೇ ಅವಧಿಯ ಮೊದಲ ದಾಳಿ
– ನಿಮ್ಮ ಸಮಯ ಮುಗಿದಿದೆ: ಟ್ರಂಪ್‌ ಎಚ್ಚರಿಕೆ

ವಾಷಿಂಗ್ಟನ್‌: ಅಮೆರಿಕದ (USA) ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಉಗ್ರರ ಮೇಲೆ ಏರ್‌ಸ್ಟ್ರೈಕ್‌ (Air Strike) ಮಾಡಿಸಿದ್ದಾರೆ. ಯೆಮೆನ್‌ನಲ್ಲಿ ಹೌತಿ ಉಗ್ರರ ನೆಲೆಗಳ (Yemen Houthi Rebels) ಅಮೆರಿಕ ಏರ್‌ಸ್ಟ್ರೈಕ್‌ (Air Strike) ನಡೆಸಿ ಧ್ವಂಸಗೊಳಿಸಿದೆ.

ಯೆಮೆನ್‌ನ ಇರಾನ್ ಬೆಂಬಲಿತ ಹೌತಿಗಳ ವಿರುದ್ಧ ದೊಡ್ಡ ಪ್ರಮಾಣದ ಮಿಲಿಟರಿ ದಾಳಿಯಿಂದ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ಅಮೆರಿಕ ಯುದ್ಧ ನೌಕೆಗಳಿಂದ ಹಾರಿದ ಯುದ್ಧ ವಿಮಾನಗಳು ಹೌತಿ ಉಗ್ರರ ಪ್ರಮುಖ ಸ್ಥಳಗಳ ಮೇಲೆ ಬಾಂಬ್‌ ದಾಳಿ ನಡೆಸಿದೆ.

ಕೆಂಪು ಸಮುದ್ರದಲ್ಲಿ ಸರಕು ಸಾಗಾಣಿಕೆ ಹಡಗು ಮೇಲೆ ಹೌತಿ ಉಗ್ರರು ನಡೆಸಿದ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ಸಮಯ ಮುಗಿದಿದೆ ಮತ್ತೆ ದಾಳಿ ಮಾಡಿದರೆ ನಿಮಗೆ ನರಕ ತೋರಿಸಲಾಗುವುದು ಎಂದು ಟ್ರಂಪ್‌ ಗುಡುಗಿದ್ದಾರೆ.

ಜಾಗತಿಕ ವ್ಯಾಪಾರ ಮತ್ತು ಅಮೆರಿಕ ಸ್ವತ್ತುಗಳನ್ನು ರಕ್ಷಿಸಲು ಈ ದಾಳಿ ಮಾಡಿದ್ದೇವೆ ಎಂದು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಭಯೋತ್ಪಾದಕ ಪಡೆ ಅಮೆರಿಕದ ವಾಣಿಜ್ಯ ಮತ್ತು ನೌಕಾ ಹಡಗುಗಳು ವಿಶ್ವದ ಜಲಮಾರ್ಗಗಳಲ್ಲಿ ಮುಕ್ತವಾಗಿ ನೌಕಾಯಾನ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹೌತಿಗಳಿಗೆ ಇರಾನ್‌ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ಇರಾನ್‌ ದೇಶವನ್ನು ಸಂಪೂರ್ಣವಾಗಿ ಹೊಣೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಹೌತಿಗಳ ಬೆದರಿಕೆಗೆ ಮಾಜಿ ಅಧ್ಯಕ್ಷ ಜೋ ಬೈಡನ್‌ ಪ್ರಬಲವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಟೀಕಿಸಿದ್ದಾರೆ.

ಜೋ ಬೈಡೆನ್ ಸರ್ಕಾರದ ಪ್ರತಿಕ್ರಿಯೆ ಶೋಚನೀಯವಾಗಿ ದುರ್ಬಲವಾಗಿತ್ತು. ಇದರಿಂದಾಗಿ ಹೌತಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ಕೆಂಪು ಸಮುದ್ರದ ಮೂಲಕ ಹಾದುಹೋದ ಕೊನೆಯ ಅಮೆರಿಕನ್ ಯುದ್ಧನೌಕೆಯ ಮೇಲೆ ಹೌತಿಗಳು ಒಂದು ಡಜನ್‌ಗಿಂತಲೂ ಹೆಚ್ಚು ಬಾರಿ ದಾಳಿ ಮಾಡಿದ್ದಾರೆ. ಇರಾನ್‌ನಿಂದ ಹಣಕಾಸು ಪಡೆದ ಹೌತಿ ಗೂಂಡಾಗಳು ಯುಎಸ್ ವಿಮಾನಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದ್ದಾರೆ. ಈ ಕಾರಣಕ್ಕೆ ದಾಳಿ ನಡೆಸಲಾಗಿದೆ ಎಂದು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಬಸ್‌ ಉರುಳಿಸಿ 9 ಮಂದಿ ತೀರ್ಥಯಾತ್ರಿಗಳನ್ನು ಹತೈಗೈದ ಉಗ್ರ ಪಾಕ್‌ನಲ್ಲಿ ಮಟಾಷ್‌

 

ಈಗ ಅಮೆರಿಕ ದಾಳಿ ನಡೆಸಿದ್ದು ಯಾಕೆ?
2023 ರ ಅಂತ್ಯದಿಂದ ಹೌತಿಗಳು ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಇತರ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈಗ ಗಾಜಾದಲ್ಲಿ ಕದನ ವಿರಾಮದ ಹೊರತಾಗಿಯೂ ಹೌತಿಗಳು ಇತ್ತೀಚೆಗೆ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಕ್ಕೆ ಅಮೆರಿಕ ಈಗ ದಾಳಿ ನಡೆಸಿದೆ.

ಎಲ್ಲಿಲ್ಲಿ ದಾಳಿ?
ಪ್ರಸಿದ್ಧ ಮಿಲಿಟರಿ ತಾಣವಾದ ಸನಾ ವಿಮಾನ ನಿಲ್ದಾಣ ಸಂಕೀರ್ಣ, ಸೌದಿ ಗಡಿಯ ಬಳಿ ಹೌತಿಗಳ ಉತ್ತರದ ಭದ್ರಕೋಟೆಯಾದ ಸಾದಾ, ನೈಋತ್ಯ ಪ್ರದೇಶದಲ್ಲಿರುವ ಧಮರ್ ಮತ್ತು ಅಬ್ಸ್, ಹೌತಿ ಮಿಲಿಟರಿ ಸೌಲಭ್ಯಗಳ ನೆಲೆಯಾಗಿರುವ ಗೆರಾಫ್ ಮೇಲೆ ದಾಳಿ ನಡೆದಿದೆ.

 

Share This Article