Trump Assassination Attempt | ಮನೆಯಿಂದ ಮನೆಗೆ ಟೆರೇಸ್ ಮೇಲೆ ಜಿಗಿಯುತ್ತಾ ಬಂದಿದ್ದ ಯುವಕ

Public TV
2 Min Read

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಪ್ರಚಾರದ ನಡೆಸುತ್ತಿದ್ದ ಸಮಯದಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದರೂ ಗನ್‌ ಹಿಡಿದ ಯುವಕ ಟೆರೇಸ್ ಮೇಲೆ ಬಂದಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಭದ್ರತಾ ವಿಚಾರ ಬಂದಾಗ ಅಮೆರಿಕ ಸೀಕ್ರೇಟ್‌ ಸರ್ವೀಸ್‌ಗೆ (Secret Service) ವಿಶ್ವದಲ್ಲೇ ಸ್ಥಾನವಿದೆ. ಸೀಕ್ರೇಟ್ ಸರ್ವೀಸ್‌ ಭದ್ರತೆಯಲ್ಲಿ ಲೋಪವಾಗುವುದಿಲ್ಲ. ಹೀಗಿರುವಾಗ ಮಾಜಿ ಅಧ್ಯಕ್ಷರ ಮೇಲೆ ಗುಂಡಿನ ದಾಳಿ ನಡೆಯುವ ಮೂಲಕ ಭಾರೀ ಲೋಪವಾಗಿದೆ.

ಸ್ಥಳದಲ್ಲಿ ಭಾರಿ ಬಿಗಿ ಭದ್ರತೆಯಿದ್ದರೂ ಗನ್ ಹಿಡಿದ 20 ವರ್ಷದ ಯುವಕ ಥಾಮಸ್ ಕ್ರುಕ್ಸ್ (Thomas Matthew Crooks) ಆ ಸ್ಥಳಕ್ಕೆ ಬಂದಿದ್ದು ಹೇಗೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಭದ್ರತಾ ಪಡೆ ಹೇಳಿರುವುದಾಗಿ ವರದಿಯಾಗಿದೆ.

ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಪ್ರತಿಕ್ರಿಯಿಸಿ, ನಾವು ಹಂತಕನನ್ನು ನೋಡಿದ್ದೆವು. ಭದ್ರತಾ ಪಡೆಗೆ ಈ ಬಗ್ಗೆ ಮಾಹಿತಿ ಸಹ ನೀಡಿದ್ದೆವು. ಆದರೆ ಭದ್ರತಾ ಪಡೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.

ಥಾಮಸ್ ಕ್ರುಕ್ಸ್ ಮನೆಯಿಂದ ಮನೆಗೆ ಜಿಗಿದು ಉತ್ಪಾದನಾ ಘಟಕದ ಛಾವಣಿಯ ಮೇಲೆ ಕೂತು ಟ್ರಂಪ್‌ ಮೇಲೆ ಗುಂಡು ಹಾರಿಸಿದ್ದ. ಟ್ರಂಪ್ ಭಾಷಣ ಮಾಡುತ್ತಿದ್ದ ಸ್ಥಳದಿಂದ 200 ರಿಂದ 250 ಅಡಿ ದೂರದಲ್ಲಿದ್ದ ಉತ್ಪಾದನಾ ಚಾವಣಿಯ ಮೇಲೆ ಮಲಗಿ ಶೂಟ್‌ ಮಾಡಿದ್ದ. ಶೂಟ್‌ ಮಾಡಿದ ಬೆನ್ನಲ್ಲೇ ಅಮೆರಿಕದ ಸ್ನೈಪರ್ಸ್‌ ಆತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಥಾಮಸ್ ಕ್ರುಕ್ಸ್ ಬೂದು ಬಣ್ಣದ ಜಾಕೆಟ್ ಧರಿಸಿ ಗನ್ ಹಿಡಿದು ಮಲಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿರುವ ವಿಡಿಯೋ ಒಂದರಲ್ಲಿ ಕಾಣಿಸುತ್ತದೆ.

ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಮುಂದಾಗಿದ್ದ ಥಾಮಸ್‌ ಕ್ರುಕ್ಸ್‌ ಉದ್ದೇಶ ಏನು ಎನ್ನುವುದು ತಿಳಿದು ಬಂದಿಲ್ಲ. ಎಫ್‌ಬಿಐ ಅಧಿಕಾರಿಗಳು ಈಗ ಆತನ ಫೋನ್‌ ವಶಕ್ಕೆ ಪಡೆದು ಮಾಹಿತಿ ತೆಗೆಯುತ್ತಿದ್ದಾರೆ. ಆತನ ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳು ಆತನ ಕಾರಿನಲ್ಲಿ ಸ್ಫೋಟಕ ಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಘಟನೆ?
ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ ರಾಜ್ಯದ ಬಟ್ಲರ್‌ ಟೌನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹಿರಂಗ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಥಾಮಸ್ ಕ್ರುಕ್ಸ್ ಗುಂಡು ಹಾರಿಸಿದ್ದ. ಅದೃಷ್ಟವಶಾತ್ ಗುಂಡು ಟ್ರಂಪ್ ಬಲ ಕಿವಿಯನ್ನು ಸೀಳಿ, ಕಾರ್ಯಕರ್ತನ ಎದೆಗೆ ನುಗ್ಗಿದೆ. ತಕ್ಷಣವೇ ಟ್ರಂಪ್ ಕೆಳಗೆ ಕೂತು ತಪ್ಪಿಸಿಕೊಂಡಿದ್ದಾರೆ.

ಅರೆಕ್ಷಣದಲ್ಲೇ ಭದ್ರತಾ ಪಡೆಗಳು ಟ್ರಂಪ್ ಸುತ್ತುವರಿದು ರಕ್ಷಣೆ ನೀಡಿವೆ. ಕ್ಷಣಾರ್ಧದಲ್ಲೇ ಅಣತಿ ದೂರದ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕೂತು ಗುಂಡು ಹಾರಿಸಿದ ಹಂತಕನನ್ನು ಅಮೆರಿಕ ಸ್ನಿಪ್ಪರ್‌ಗಳು ಹೊಡೆದುರುಳಿಸಿವೆ. ಹಂತಕನನ್ನು ಬೆಥೆಲ್ ಪಾರ್ಕ್ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಎಫ್‌ಬಿಐ ಗುರುತಿಸಿದೆ.

 

ಘಟನೆ ಬಳಿಕ ಸಾವರಿಸಿಕೊಂಡ ಟ್ರಂಪ್, ಕೈ ಎತ್ತಿ ಮುಷ್ಠಿ ಹಿಡಿದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಸರಣಿ ಟ್ವೀಟ್ ಮಾಡಿ, ನನ್ನ ಬಲಕಿವಿಯ ಮೇಲ್ಭಾಗದಲ್ಲಿ ಗಾಯವಾಗಿದೆ. ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆದಿರುವುದನ್ನು ನಂಬಲಾಗುತ್ತಿಲ್ಲ. ಸೀಕ್ರೆಟ್ ಸರ್ವಿಸ್ ಹಾಗೂ ಕಾನೂನು ವ್ಯವಸ್ಥೆ ಕೈಗೊಂಡ ತ್ವರಿತ ಕ್ರಮಕ್ಕೆ ಧನ್ಯವಾದಗಳು ಅಂದಿದ್ದಾರೆ.

Share This Article