ಕೋವಿಡ್‌ ಕಾಲದಲ್ಲಿ 70,000 ಲಸಿಕೆ – ಮೋದಿಗೆ ಅತ್ಯುನ್ನತ ಪ್ರಶಸ್ತಿ ಘೋಷಿಸಿದ ಡೊಮಿನಿಕಾ!

Public TV
1 Min Read

ರೋಸೌ: ಕೋವಿಡ್‌-19 (Covid-19 ) ಉಲ್ಬಣಗೊಂಡಿದ್ದ ಕಾಲದಲ್ಲಿ ಡೊಮಿನಿಕಾಗೆ (Dominica) ಭಾರತ (India) ನೀಡಿದ್ದ ಸಹಾಯಕ್ಕಾಗಿ ಕಾಮನ್‌ವೆಲ್ತ್ ಆಫ್ ಡೊಮಿನಿಕಾ ತನ್ನ ಅತ್ಯುನ್ನತ ರಾಷ್ಟ್ರೀಯ ಗೌರವ ಪ್ರಶಸ್ತಿಯಾದ ಡೊಮಿನಿಕಾ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ನೀಡುವುದಾಗಿ ಘೋಷಿಸಿದೆ.

ನ.19 ರಿಂದ 21 ರವರೆಗೆ ಗಯಾನಾದ ಜಾರ್ಜ್‌ಟೌನ್‌ನಲ್ಲಿ ನಡೆಯಲಿರುವ ಭಾರತ-ಕ್ಯಾರಿಕಾಮ್ ಶೃಂಗಸಭೆಯಲ್ಲಿ ಕಾಮನ್‌ವೆಲ್ತ್ ಆಫ್ ಡೊಮಿನಿಕಾ ಅಧ್ಯಕ್ಷ ಸಿಲ್ವಾನಿ ಬರ್ಟನ್ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ಡೊಮಿನಿಕಾ ಪ್ರಧಾನಿ ಕಚೇರಿ ತಿಳಿಸಿದೆ.

2021ರ ಫೆಬ್ರವರಿಯಲ್ಲಿ ಭಾರತ ಡೊಮಿನಿಕಾಗೆ 70,000 COVID-19 ಲಸಿಕೆಯನ್ನು ಪೂರೈಸಿತ್ತು. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಡೊಮಿನಿಕಾಗೆ ಭಾರತ ಬೆಂಬಲ ಸೂಚಿಸಿದೆ. ಇದರಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲು ಡೊಮಿನಿಕಾ ಮುಂದಾಗಿದೆ.

ಪ್ರಧಾನಿ ಮೋದಿಯವರು ಡೊಮಿನಿಕಾಗೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಕೋವಿಡ್‌ ಕಾಲದಲ್ಲಿ ನಮಗೆ ಬೆಂಬಲ ನೀಡಿದ್ದಾರೆ. ಅದಕ್ಕಾಗಿ ನಮ್ಮ ಕೃತಜ್ಞತೆಯ ಸಂಕೇತವಾಗಿ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಅವರಿಗೆ ನೀಡಲಾಗುತ್ತದೆ ಎಂದು ಡೊಮಿನಿಕಾ ಪ್ರಧಾನಿ ರೂಸ್‌ವೆಲ್ಟ್ ಸ್ಕೆರಿಟ್ ಹೇಳಿದ್ದಾರೆ.

ರೂಸ್‌ವೆಲ್ಟ್ ಸ್ಕೆರಿಟ್ ಅವರೊಂದಿಗೆ ಸಿಲ್ವಾನಿ ಬರ್ಟನ್ ಅವರು ಭಾರತ-ಕ್ಯಾರಿಕಾಮ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇದಿಕೆಯು ಭಾರತ ಮತ್ತು CARICOM ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ಅನ್ವೇಷಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.

Share This Article