ಭೂಗತ ಪಾತಕಿ ಜೈರಾಜ್ ಪಾತ್ರದಲ್ಲಿ ಡಾಲಿ

Public TV
1 Min Read

ಬೆಂಗಳೂರು: ಡಾಲಿ ಖ್ಯಾತಿಯ ಧನಂಜಯ್ ಇತ್ತೀಚೆಗೆ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ದು, ಒಂದರ ಮೇಲೊಂದು ಸಿನಿಮಾ ಆಫರ್‍ಗಳು ಅವರನ್ನು ಅರಸಿ ಬರುತ್ತಿವೆ. ಅಲ್ಲದೆ ಒಂದಕ್ಕಿಂತ ಮತ್ತೊಂದು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಧನಂಜಯ್ ತಯಾರಾಗಿದ್ದು, ಸಿಲಿಕಾನ್ ಸಿಟಿಯ ಭೂಗತ ಪಾತಕಿ ಜೈರಾಜ್ ಪಾತ್ರ ನಿರ್ವಹಿಸಲಿದ್ದಾರೆ.

`ಟಗರು’ ಸಿನಿಮಾ ತೆರೆಕಂಡ ನಂತರ ಡಾಲಿ ಧನಂಜಯ್ ನಸೀಬು ಫುಲ್ ಚೇಂಜ್ ಆಗಿದೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಅವರಿಗೆ ಆಫರ್‍ಗಳು ಹುಡುಕಿಕೊಂಡು ಬರುತ್ತಿವೆ. ಸ್ಯಾಂಡಲ್‍ವುಡ್‍ನಲ್ಲಿ ಭೂಗತ ಪಾತಕಿ ಜಯರಾಜ್ ಜೀವನ ಆಧರಿಸಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ ಡಾಲಿ ಧನಂಜಯ್ ಜೀವ ತುಂಬಲು ಮುಂದಾಗಿದ್ದಾರೆ. 1970-89ರ ಅವಧಿಯಲ್ಲಿ ಜಯರಾಜ್ ಇಡೀ ಬೆಂಗಳೂರಿನ್ನೇ ನಡುಗಿಸಿದ್ದ. ಅಷ್ಟೇ ಅಲ್ಲ ರಾಜ್ಯ ರಾಜಕೀಯದ ಮೇಲೂ ಹಿಡಿತ ಸಾಧಿಸಿದ್ದ. 1989ರಲ್ಲಿ ಈತನನ್ನು ಹತ್ಯೆ ಮಾಡಲಾಗಿತ್ತು. ಇದೀಗ ಜೈರಾಜ್ ಜೀವನದ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದ್ದು, ಭೂಗತ ಪಾತಕಿ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ.

ಎರಡು ಭಾಗಗಳಲ್ಲಿ ಜಯರಾಜ್ ಚಿತ್ರ ಮಾಡಲು ಪ್ಲಾನ್ ಮಾಡಲಾಗಿದೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಸಿನಿಮಾಗೆ ಕಥೆ ಬರೆದಿದ್ದಾರೆ. ಅಶು ಬೆದ್ರ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೊಸ ಪ್ರತಿಭೆ ಶೂನ್ಯ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕಾಗಿ ಧನಂಜಯ್ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಡಾಲಿ ಸದ್ಯ ಎರಡು ಚಿತ್ರಗಳ ಕಮಿಟ್‍ಮೆಂಟ್‍ನಲ್ಲಿದ್ದು, ಇದು ಪೂರ್ಣಗೊಂಡ ನಂತರ ಜೈರಾಜ್ ಚಿತ್ರ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಡಾಲಿ ಧನಂಜಯ್ ಅಭಿನಯದ ‘ಪಾಪ್‍ಕಾರ್ನ್ ಮಂಕಿ ಟೈಗರ್’ ಫೆ.21ರಂದು ತೆರೆಗೆ ಬರಲು ಸಿದ್ಧವಾಗಿದೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಚಿತ್ರ ಬಿಡುಗಡೆಗೂ ಮುನ್ನವೇ 10 ಕೋಟಿ ವ್ಯವಹಾರ ಕುದುರಿಸಿದೆ. ಚಿತ್ರದ ಟೀಸರ್ ಸಿನಿಪ್ರಿಯರಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿಸಿದ್ದು, ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಕಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *