ಶಿರೂರು ಗುಡ್ಡ ಕುಸಿತದಲ್ಲಿ ಮಾಲೀಕನನ್ನ ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಪೊಲೀಸ್‌ ಇಲಾಖೆ ಸೇರ್ಪಡೆ

Public TV
2 Min Read

– ಮ್ಯಾರಥಾನ್‌ ಓಟದಲ್ಲಿ ಬೆಳ್ಳಿ ಪದಕ

ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ (Shirur landslide) ತನ್ನ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಇದೀಗ ಪೊಲೀಸ್ ಇಲಾಖೆ (Police Department) ಸೇರಿದೆ.

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್ ಇದನ್ನು ದತ್ತು ಪಡೆದು ಪಳಗಿಸಿದ್ದು, ಇಂದು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ಜಾಗೃತಿ ಮೂಡಿಸಲು ನಡೆದ 5 ಕಿಮೀ ಮ್ಯಾರಾಥಾನ್‌ (Marathon) ಓಟದಲ್ಲಿ ಈ ಶ್ವಾನ ಬೆಳ್ಳಿ ಪದಕ ಪಡೆದಿದೆ. ಇದನ್ನೂ ಓದಿ: ಮ್ಯಾರಥಾನ್‌ನಲ್ಲಿ ಕುಸಿದು ಬಿದ್ದ ವ್ಯಕ್ತಿ – ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ ಸತೀಶ್ ಸೈಲ್

ಹೌದು.. ಶಿರೂರಿನ ಗುಡ್ಡ ಕುಸಿತ ಪ್ರಕರಣ ಇಡೀ ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ಕಳೆದ 2024ರ ಜುಲೈ 16 ರಂದು ಧಾರಾಕಾರವಾಗಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತವಾಗಿ 11 ಜನ ಮೃತಪಟ್ಟಿದ್ದರು. ಹೆದ್ದಾರಿ ಪಕ್ಕದಲ್ಲೇ ಲಕ್ಷ್ಮಣ್ ನಾಯ್ಕ ಎನ್ನುವವರು ಹೋಟೆಲ್ ನಡೆಸುತ್ತಿದ್ದು ಗುಡ್ಡ ಕುಸಿದು ಮಣ್ಣು ಹೋಟೆಲ್ ಮೇಲೆ ಬಿದ್ದ ಪರಿಣಾಮ ಆತ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಲಕ್ಷ್ಮಣ್ ನಾಯ್ಕ ಕುಟುಂಬದವರು ಪ್ರೀತಿಯಿಂದ ಸಾಕಿದ್ದ ಶ್ವಾನವೊಂದು ಅನಾಥವಾಗಿತ್ತು. ಕಾರ್ಯಾಚರಣೆ ವೇಳೆ ಪ್ರತಿದಿನ ಬಂದು ಮಾಲೀಕನ ಬರುವಿಕೆಗಾಗಿ ಶ್ವಾನ ಕಾಯುತ್ತಾ ಕುಳಿತಿರುವುದು ಸಾಕಷ್ಟು ಗಮನ ಸೆಳೆದಿತ್ತು.

ಇದನ್ನು ಗಮನಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್, ಶ್ವಾನವನ್ನ ದತ್ತು ಪಡೆದು ಸಲುಹಿದರು. ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಇದೇ ಶ್ವಾನಕ್ಕೆ ತರಬೇತಿ ನೀಡಿದ್ದರು. ಸದ್ಯ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಈ ಶ್ವಾನ ಎಲ್ಲರ ಗಮನ ಸೆಳೆದಿದೆ. ಇಂದು ಪೊಲೀಸ್ ಇಲಾಖೆಯಿಂದ ನಡೆದ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ಜಾಗೃತಿ ಮೂಡಿಸಲು ನಡೆದ ಮ್ಯಾರಾಥಾನ್‌ ಓಟಲ್ಲಿ ಈ ಶ್ವಾನ 5 ಕಿಲೋ ಮೀಟರ್ ಸಂಚರಿಸಿ ಬೆಳ್ಳಿ ಪದಕ ಪಡೆದಿದ್ದು ಕಾರವಾರದ ಶಾಸಕ ಸತೀಶ್ ಸೈಲ್ ಶ್ವಾನಕ್ಕೆ ಪದಕ ತೊಡಿಸಿದರು.

ಇನ್ನು ಶ್ವಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ತನ್ನ ಮನೆಯಲ್ಲಿಯೇ ಇಟ್ಟುಕೊಂಡು ತರಬೇತಿಯನ್ನ ನೀಡಿದ್ದು ಬೇರೆ ಶ್ವಾನಗಳಂತೆ ಈ ಶ್ವಾನ ಸಹ ಸಾಕಷ್ಟು ಚುರುಕಿನಿಂದ ಕೆಲಸ ಮಾಡುತ್ತಿದೆ. ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ನೆಚ್ಚಿನ ಶ್ವಾನವಾಗಿದ್ದು ಪ್ರತಿನಿತ್ಯ ಬೆಳಿಗ್ಗೆ ಕೆಲಸಕ್ಕೆ ಹೊಗಬೇಕಾದರೆ ಸಲ್ಯೂಟ್ ಮಾಡಿಯೇ ಕಳಿಸುತ್ತದೆ. ಮನೆಗೆ ವಾಪಾಸ್ ಬರುವ ವೇಳೆಯಲ್ಲಿ ಗೇಟ್ ಬಳಿಯೇ ಕಾಯುತ್ತಾ ಕುಳಿತಿರುತ್ತದೆ. ಈ ಶ್ವಾನ ತನ್ನ ಮನೆಯ ಸದಸ್ಯನಂತಾಗಿದೆ ಎನ್ನುತ್ತಾರೆ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್. ಇದನ್ನೂ ಓದಿ: ನಾನು ನಿಮ್ಮ ಹಾಗೆ ಆಗಬೇಕು ಎಂದ ವಿದ್ಯಾರ್ಥಿನಿಯನ್ನು ತಮ್ಮ ಕುರ್ಚಿಯಲ್ಲಿ ಕೂರಿಸಿದ ಉ.ಕನ್ನಡ ಜಿಲ್ಲಾಧಿಕಾರಿ

Share This Article