ರೀಲ್ಸ್ ನೋಡುತ್ತಾ ಮಗುವನ್ನೇ ಮರೆತ ತಾಯಿ – ರಾತ್ರಿ ಇಡೀ ತೋಟದಲ್ಲಿದ್ದ ಕಂದನನ್ನು ಪತ್ತೆ ಮಾಡಿದ ಶ್ವಾನ!

2 Min Read

ಮಡಿಕೇರಿ: ಮೊಬೈಲ್‌ನಲ್ಲಿ (Mobile) ರೀಲ್ಸ್‌ ನೋಡುತ್ತಾ ಮಹಿಳೆಯೋರ್ವಳು ತನ್ನ 2 ವರ್ಷದ ಮಗುವನ್ನೇ ಕಾಫಿ ತೋಟದಲ್ಲಿ ಬಿಟ್ಟು ಬಂದ ಘಟನೆ ದ.ಕೊಡಗಿನ (Kodagu) ಬಿ.ಶೆಟ್ಟಿಗೇರಿ ಬಳಿಯ ಕೊಂಗಣ ಗ್ರಾಮದಲ್ಲಿ ನಡೆದಿದೆ. ರಾತ್ರಿ ಇಡೀ ಕಾಫಿ ತೋಟದಲ್ಲಿದ್ದ ಮಗುವನ್ನು ಶ್ವಾನವೊಂದು (Dog) ಪತ್ತೆ ಮಾಡಿದೆ.

ಕಾಫಿ ತೋಟದಲ್ಲಿ ವಾಸವಾಗಿದ್ದ ಕಾರ್ಮಿಕ ಕುಟುಂಬ ಎರಡು ವರ್ಷದ ಕಂದಮ್ಮನನ್ನು ಕಾಫಿ ತೋಟದಲ್ಲಿ ಆಟವಾಡಲು ಬಿಟ್ಟು ತಮ್ಮ ಕಾಯಕದಲ್ಲಿ ಮಗ್ನರಾಗಿದ್ದರು. ಮಗುವಿನ ಮೇಲೆ ಗಮನವಿರಬೇಕಾದ ಹೆತ್ತ ತಾಯಿ (Mother) ನಾಗಿಣಿ ಕೆಲಸದಲ್ಲಿಯೇ ಸಮಯ ಕಳೆದಿದ್ದು, ನಂತರ ಮೊಬೈಲ್‍ನಲ್ಲಿ ರೀಲ್ಸ್ ನೋಡಿಕೊಂಡು ಮನೆಗೆ ಬಂದಿದ್ದಾಳೆ. ಮನೆಗೆ ಬಂದ್ರು ಮಗುವಿನ ನೆನಪೇ ಇಲ್ಲದೇ, ರಾತ್ರಿ ಸಮಯದಲ್ಲಿ ತನ್ನ ಮಗುವನ್ನು ತೋಟದಲ್ಲಿ ಬಿಟ್ಟು ಬಂದಿರುವುದಾಗಿ ನೆನಪಿಸಿಕೊಂಡಿದ್ದಾಳೆ. ಇದನ್ನೂ ಓದಿ: ತವರಲ್ಲೇ ಕಾವೇರಿ ನದಿ ವಿಷಜಲ

ಮನೆಯ ಸದಸ್ಯರು ತೋಟದಲ್ಲಿ ಹುಡುಕಾಟ ನಡೆಸಿದರೂ ತೋಟದಲ್ಲಿ ಮಗು ಪತ್ತೆಯಾಗಿಲ್ಲ. ಎಲ್ಲೇ ಹುಡುಕಿದ್ರು ಮಗುವಿನ ವಿಚಾರ ಗೊತ್ತಾಗದಿದ್ದಾಗ, ತೋಟದಿಂದಲೇ ಕಣ್ಣೀರುಡುತ್ತ ಬಂದ ಮಗುವಿನ ತಂದೆ ಸುನೀಲ್ ಹಾಗೂ ತಾಯಿ ನಾಗಿಣಿ ಮಗು ಕಾಣೆಯಾದ ಬಗ್ಗೆ ಕಾಫಿ ತೋಟದ ಮಾಲೀಕರಿಗೆ ತಿಳಿಸಿದ್ದಾರೆ.

ತೋಟದ ಮಾಲೀಕರು ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಬೋಪಣ್ಣರಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬೋಪಣ್ಣ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕತ್ತಲೆಯಲ್ಲಿಯೇ ಕಾರ್ಯಚರಣೆ ಆರಂಭಿಸಿದರೂ ಮಗುವಿನ ಸುಳಿವು ಸಿಗದೇ ರಾತ್ರಿಯ ಕಾರ್ಯಚರಣೆ ಅರ್ಧದಲ್ಲಿಯೇ ನಿಲ್ಲಿಸಿದರು.

ಬೆಳಿಗ್ಗೆ ಮತ್ತೆ ಕಾರ್ಯಚರಣೆ ಆರಂಭಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ನಾಲ್ಕು ತಂಡಗಳಾಗಿ ಗ್ರಾಮಸ್ಥರ ಸಹಾಯದಿಂದ ಇಡೀ ಕಾಫಿ ತೋಟವನ್ನು ಸುತ್ತು ಹಾಕಿದ್ದರು. ಆದರೂ ಸಹ ಮಗುವಿನ ಸುಳಿವು ಮಾತ್ರ ಸಿಗಲೇ ಇಲ್ಲ. ಬಳಿಕ ಕಾಫಿ ತೋಟದ ಮಾಲೀಕ ತಮ್ಮ ಮೆಚ್ಚಿನ ಶ್ವಾನ ಓರಿಯೋ ಜೊತೆ ತೆರಳಿದ್ದರು.

ಓರಿಯೋ ತನ್ನ ಮಾಲೀಕನ ಸೂಚನೆಯಂತೆ ಕಾಫಿ ತೋಟದಲ್ಲಿ ಮಗುವಿಗಾಗಿ ಹುಡುಕಾಟ ನಡೆಸಿತು. ತೋಟ ಸುತ್ತಾಡುತ್ತಿದ್ದಂತೆಯೇ ಮಗುವಿನ ಇರುವಿಕೆಯನ್ನು ಪತ್ತೆ ಹಚ್ಚಿದ ಶ್ವಾನ ಜೋರಾಗಿ ಕೂಗಿ ತನ್ನ ಮಾಲಿಕರಿಗೆ ಸಂದೇಶ ರವಾನಿಸಿದೆ. ತಕ್ಷಣವೇ ಮಗು ಇರುವ ಜಾಗಕ್ಕೆ ತೆರಳಿದ ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿ, ಮಗುವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಹರಿಯಾಣ ಮೂಲದ ಮಹಿಳೆಯ ಶವ ಕೊಡಗಿನ ಗಡಿಭಾಗದಲ್ಲಿ ಪತ್ತೆ!

Share This Article