ಮನೆ ಮೇಲೆ ಮಸಿ ಎರಚಿದ ಕಿಡಿಗೇಡಿಗಳು- ನಾನು ಯಾವುದಕ್ಕೂ ಹೆದರಲ್ಲ ಎಂದ ಓವೈಸಿ

Public TV
2 Min Read

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿರುವ ತಮ್ಮ ನಿವಾಸದ ಮೇಲೆ ಕಿಡಿಗೇಡಿಗಳು ಮಸಿ ಎರಚಿದ್ದಾರೆ ಎಂದು ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಗುರುವಾರ ಕೆಲವು ಕೆಲ ದುಷ್ಕರ್ಮಿಗಳು ನನ್ನ ಮನೆ ಮೇಲೆ ಮಸಿ ಎರಚಿದ್ದಾರೆ. ದೆಹಲಿಯಲ್ಲಿರುವ ನನ್ನ ಮನೆಯನ್ನು ಆಗಾಗ ಟಾರ್ಗೆಟ್‌ ಮಾಡಲಾಗುತ್ತಿದೆ. ಈ ಬಗ್ಗೆ ದೆಹಲಿ ಪೊಲೀಸ್‌ ಅಧಿಕಾರಿಗಳನ್ನು ಕೇಳಿದರೆ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂದರು.

 

 

ಎಕ್ಸ್ ಪೋಸ್ಟ್‌ಗೆ ಗೃಹ ಸಚಿವ ಅಮಿತ್ ಶಾ (Amitshah) ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಅವರನ್ನು ಓವೈಸಿ ಟ್ಯಾಗ್ ಮಾಡಿದ್ದಾರೆ. ಗೃಹ ಸಚಿವರ ಮೇಲ್ವಿಚಾರಣೆಯಲ್ಲಿ ಇದೆಲ್ಲ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಓಂ ಬಿರ್ಲಾ ಅವರನ್ನು ಟ್ಯಾಗ್ ಮಾಡಿ, ಸಂಸದರ ಸುರಕ್ಷತೆಯ ಭರವಸೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ ಎಂದಿದ್ದಾರೆ. ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ರಲ್ಲಿ ಛಾವಣಿ ಕುಸಿದು 6 ಮಂದಿಗೆ ಗಾಯ

ನಾನು ಹೆದರಲ್ಲ: ನನ್ನ ಮನೆಯನ್ನು ಗುರಿಯಾಗಿಸುವ ಸಣ್ಣ-ಪುಟ್ಟ ಗೂಂಡಾಗಳಿಗೆ ನಾನು ಹೆದರುವುದಿಲ್ಲ ಎಂದು ಹೇಳಿದ ಓವೈಸಿ, ಸಾವರ್ಕರ್ ಮಾದರಿಯ ಈ ಹೇಡಿತನದ ಕೃತ್ಯವನ್ನು ನಿಲ್ಲಿಸಿ. ಮಸಿ ಎರಚಿದ ನಂತರ ಅಥವಾ ಕಲ್ಲು ತೂರಾಟ ಮಾಡಿದ ನಂತರ ಓಡಿಹೋಗಬೇಡಿ. ನನ್ನನ್ನು ಎದುರಿಸಲು ಧೈರ್ಯ ಮಾಡಿ. ನಾನು ಯಾವುದಕ್ಕೂ ಹೆದರಲ್ಲ ಎಂದು ಸಂಸದರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ್ದು ರಾಜಕೀಯ ಕೋಲಾಹಲ ಸೃಷ್ಟಿಸಿತ್ತು. ಹಲವು ಬಿಜೆಪಿ ನಾಯಕರು ಓವೈಸಿ ವಿರುದ್ಧ ಕಿಡಿಕಾರಿದ್ದರು.

ದೆಹಲಿಯ ಅಶೋಕ ರಸ್ತೆಯ ಬಳಿ ಇರುವ ಓವೈಸಿ ಮನೆ ಮೇಲೆ ಈ ಹಿಂದೆಯೂ ಹಲವು ಬಾರಿ ದಾಳಿ ನಡೆದಿದೆ. ಕಳೆದ ವರ್ಷವೂ ಆಗಸ್ಟ್ ತಿಂಗಳಿನಲ್ಲಿ ಅವರ ನಿವಾಸದ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದರು. 2022 ರಲ್ಲಿ ಉತ್ತರ ಪ್ರದೇಶದಲ್ಲಿ ಅವರ ಬೆಂಗಾವಲು ಪಡೆ ಮೇಲೆ ಗುಂಡು ಹಾರಿಸಲಾಗಿತ್ತು.

Share This Article