ಹೆಲ್ಮೆಟ್ ಹಾಕ್ಕೊಂಡು ಚಿಕಿತ್ಸೆ ನೀಡಿದ ವೈದ್ಯರು!

Public TV
1 Min Read

ಹೈದರಾಬಾದ್: ನಗರದ ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹೆಲ್ಮೆಟ್ ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ವಿಶೇಷ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

ತೆಲಂಗಾಣದ ಅತ್ಯಂತ ದೊಡ್ಡ ಹಾಗೂ ಹಳೆಯ ಆಸ್ಪತ್ರೆ ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದೆ. ಹೀಗಾಗಿ ಅಲ್ಲಿನ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ನಿತ್ಯವೂ ಪ್ರಾಣಭಯದಲ್ಲಿಯೇ ಕಾಲಕಳೆಯುತ್ತಿದ್ದಾರೆ. ಓಸ್ಮಾನಿಯಾ ಆಸ್ಪತ್ರೆ 100 ವರ್ಷಗಳಷ್ಟು ಹಳೆಯದಾಗಿದ್ದು, ಕಟ್ಟಡವು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕೆಲವು ಕಡೆ ಮೇಲಿಂದ ಸಿಮೆಂಟ್ ಉದುರುತ್ತಿದ್ದು, ಸುಮಾರು 5 ಜನ ವೈದ್ಯರು ಗಾಯಗೊಂಡಿದ್ದಾರೆ ಎಂದು ವೈದ್ಯರು ದೂರಿದ್ದಾರೆ.

ಪ್ರತಿದಿನವೂ ಬೆಳಗ್ಗೆ ಒಂದು ಗಂಟೆ ಹೆಲ್ಮೆಟ್ ಹಾಕಿಕೊಂಡು, ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ರೋಗಿಗಳನ್ನು ಮಾತ್ರ ಹಾಸಿಗೆ ಮೇಲೆ ಹಾಗೇ ಬಿಡಲಾಗಿದೆ.

ಕಟ್ಟಡ ಬದಲಾಯಿಸಿ ಎಂದು ಒತ್ತಾಯಿಸಿ ಆಸ್ಪತ್ರೆಯ ವೈದ್ಯರು ಕಳೆದ ಏಪ್ರಿಲ್ ತಿಂಗಳಿನಲ್ಲಿ ಪ್ರತಿಭಟನೆ ಮಾಡಿದ್ದರು. ಆಗ ತೆಲಂಗಾಣದ ಆರೋಗ್ಯ ಸಚಿವ ಲಕ್ಷ್ಮ ರೆಡ್ಡಿ ಬೇಡಿಕೆಗೆ ಸ್ಪಂದಿಸಿ, ಆಸ್ಪತ್ರೆಯ ದುರಸ್ತಿಯ ಭರವಸೆ ನೀಡಿದ್ದರು.

ಕಟ್ಟಡವು ಅಸುರಕ್ಷಿತವಾಗಿದೆ ಎಂದು ಹೈದರಾಬಾದ್ ನಾಗರಿಕ ಸಂಸ್ಥೆ ಘೋಷಿಸಿದೆ. ಇನ್ನು ತೆಲಂಗಾಣ ರಾಜ್ಯ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯು ಆಸ್ಪತ್ರೆಯ ಎರಡು ಮಹಡಿಗಳು ಅಸುರಕ್ಷಿತವಾಗಿವೆ ಎಂದು ತಿಳಿಸಿದೆ. ಆದರೂ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವೈದ್ಯರು ಆರೋಪಿಸಿದ್ದಾರೆ.

2015ರಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಆಸ್ಪತ್ರೆಯನ್ನು ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಕೆಲವು ವಾಸ್ತು ಶಿಲ್ಪಿಗಳು ಹಾಗೂ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ದುರಸ್ತಿ ಕಾಮಗಾರಿ ಹಾಗೆ ಉಳಿದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *