ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವೈದ್ಯ

Public TV
1 Min Read

ಲಕ್ನೋ: ವೈದ್ಯನೊಬ್ಬ (Doctor) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ತಾನು ಕೂಡಾ ಆತ್ಮಹತ್ಯೆಗೆ (Suicide) ಶರಣಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿಯಲ್ಲಿ (Rae Bareli) ನಡೆದಿದೆ.

ಮಂಗಳವಾರ ತಡರಾತ್ರಿ ಈ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವೈದ್ಯನನ್ನು ಅರುಣ್ ಕುಮಾರ್ ಸಿಂಗ್ (45) ಎಂದು ಗುರುತಿಸಲಾಗಿದೆ. ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿ ಆಸ್ಪತ್ರೆಯ ನೇತ್ರ ತಜ್ಞನಾಗಿದ್ದ ಸಿಂಗ್‌ಗೆ ತನ್ನ ಕುಟುಂಬದವರು ಹಾಗೂ ಸಹೋದ್ಯೋಗಿಗಳು ಕರೆ ಮಾಡಿದ್ದರು. ಕರೆಯನ್ನು ಸ್ವೀಕರಿಸದೇ ಹೋದಾಗ ಆಸ್ಪತ್ರೆಯ ಸಂಕೀರ್ಣದ ಒಳಗೆಯೇ ಇರುವ ಮನೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

ಮನೆಯ ಬಾಗಿಲನ್ನು ತೆರೆದಾಗ ಅರುಣ್ ಪತ್ನಿ ಅರ್ಚನಾ (40) ಮಕ್ಕಳಾದ ಅರಿಬಾ (12) ಹಾಗೂ ಆರವ್ (4) ಶವವಾಗಿ ಪತ್ತೆಯಾಗಿದ್ದಾರೆ. ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸಿಂಗ್ ಮಕ್ಕಳಿಗೆ ಚುಚ್ಚು ಮದ್ದು ನೀಡಿ, ಅವರನ್ನು ಪ್ರಜ್ಞಾಹೀನರನ್ನಾಗಿ ಮಾಡಿ ಬಳಿಕ ಕೊಂದಿದ್ದಾನೆ. ಅವರಿಬ್ಬರ ತಲೆಯಲ್ಲಿ ಬಲವಾಗಿ ಹೊಡೆದಿರುವ ಗಾಯಗಳಾಗಿವೆ. ನಂತರ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚಂಡಮಾರುತಕ್ಕೆ ಬಾಲಿವುಡ್ ನಟ ಆಮೀರ್ ಸಿಲುಕಿದ್ದು ಹೇಗೆ?

ವೈದ್ಯ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆ ತನ್ನ ಪತ್ನಿ, ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದಾಗಿ ಹೇಳಿದ್ದಾರೆ. ಸಿಂಗ್‌ನ ನೆರೆಹೊರೆಯವರ ಪ್ರಕಾರ ಆತನ ಕುಟುಂಬದವರು 2 ದಿನಗಳ ಹಿಂದೆ ಭಾನುವಾರ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ

Share This Article