ಸುವರ್ಣಗಡ್ಡೆಯ ವಿಶೇಷತೆ ಏನು ಗೊತ್ತಾ? ಸಖತ್ ರುಚಿಯಾದ ಈ ರೆಸಿಪಿಯನ್ನು ನೀವೂ ಮಾಡಿ

Public TV
3 Min Read

ದೀಪಾವಳಿ ಭಾರತದಲ್ಲಿ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ವಿವಿಧ ಭಕ್ಷ್ಯಗಳ ಹಬ್ಬ ಎಂದರೂ ತಪ್ಪಿಲ್ಲ. ಏಕೆಂದರೆ ಈ ದಿನಗಳಲ್ಲಿ ಬಗೆಬಗೆಯ ತಿನಿಸುಗಳನ್ನು ಮಾಡಿ ಹಂಚಲಾಗುತ್ತದೆ. ಉತ್ತರ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ವಾರಣಾಸಿಯಲ್ಲಿ ಈ ವಿಶೇಷ ದಿನಗಳಲ್ಲಿ ಸುವರ್ಣಗಡ್ಡೆಯ ಖಾದ್ಯ ಏಕೆ ಮಾಡುತ್ತಾರೆ ತಿಳಿದಿದೆಯೇ? ಈ ಸುವರ್ಣಗಡ್ಡೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಣ್ಣಿನಲ್ಲಿ ಬೆಳೆಯುವ ಈ ಗಡ್ಡೆಯನ್ನು ತೆಗೆದ ಬಳಿವೂ ಅದರ ಬೇರುಗಳು ಭೂಮಿಯಲ್ಲಿ ಉಳಿದುಕೊಳ್ಳುತ್ತವೆ. ಇದು ಮುಂದಿನ ಋತುಗಳಲ್ಲಿ ಮತ್ತೆ ತ್ವರಿತವಾಗಿ ತಾವಾಗೇ ಬೆಳೆಯುತ್ತವೆ. ದೀಪಾವಳಿ ಸಂಪತ್ತನ್ನು ವೃದ್ಧಿಸುವುದನ್ನು ಸೂಚಿಸುತ್ತದೆ. ಆದ್ದರಿಂದ ಸುವರ್ಣಗಡ್ಡೆಯೂ ಅದೇ ತರಹ ಮಂಗಳಕರ ಎಂದು ನಂಬಲಾಗುತ್ತದೆ.

ಸುವರ್ಣಗಡ್ಡೆ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವುದರೊಂದಿಗೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನೂ ಒಳಗೊಂಡಿದೆ. ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಧಾರ್ಮಿಕ ಮಹತ್ವದೊಂದಿಗೆ ಅದರ ಆರೋಗ್ಯಕರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವಿಂದು ಸುವರ್ಣಗಡ್ಡೆಯ ರುಚಿಕರ ಅಡುಗೆಯೊಂದನ್ನು ಹೇಳಿಕೊಡುತ್ತೇವೆ. ಈರುಳ್ಳಿ, ಬೆಳ್ಳುಳ್ಳಿ ಬಳಸದ ಈ ಅದ್ಭುತ ಗ್ರೇವಿಯನ್ನು ನೀವೂ ಮಾಡಿ.

ಬೇಕಾಗುವ ಪದಾರ್ಥಗಳು:
ಸುವರ್ಣಗಡ್ಡೆ – ಅರ್ಧ ಕೆಜಿ
ರುಬ್ಬಿಕೊಂಡ ಟೊಮೆಟೋ – 3
ಮೊಸರು – 1 ಕಪ್
ದಾಲ್ಚಿನ್ನಿ ಸೊಪ್ಪು – 1
ಜೀರಿಗೆ – ಅರ್ಧ ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
ಒಣ ಮಾವಿನ ಪುಡಿ – 2 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಹುರಿಯಲು ಬೇಕಾಗುವಷ್ಟು
ಕೊತ್ತಂಬರಿ ಸೊಪ್ಪು – ಕಾಲು ಕಪ್ ಇದನ್ನೂ ಓದಿ: ಗುಲಾಬ್ ಜಾಮೂನ್ ಗೊತ್ತು.. ಗುಲಾಬ್ ಬರ್ಫಿನೂ ಟ್ರೈ ಮಾಡಿ

 

 

ಮಾಡುವ ವಿಧಾನ:
* ಮೊದಲಿಗೆ ಸುವರ್ಣಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ.
* ನಂತರ ಅದನ್ನು ಘನಗಳಾಗಿ ಕತ್ತರಿಸಿ, ಅವುಗಳಿಗೆ ಒಣ ಮಾವಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ.
* ಅದನ್ನು 2-3 ಗಂಟೆಗಳ ಕಾಲ ಸೂರ್ಯನ ಬೆಳಕಿನಲ್ಲಿ ಇರಿಸಿ. (ಸುವರ್ಣಗೆಡ್ಡೆ ತುಂಡುಗಳನ್ನು ಇರಿಸಿದ ತಟ್ಟೆಯನ್ನು ಸ್ವಲ್ಪ ಬಾಗಿಸಿ ಇರಿಸಿ. ಇದರಿಂದ ಅದು ಬಿಡುಗಡೆ ಮಾಡುವ ನೀರು ಜಾರಿ ಬೇರ್ಪಡುತ್ತದೆ.
* ನಂತರ ಒಂದು ಪಾತ್ರೆಯಲ್ಲಿ ಸಾಕಷ್ಟು ನೀರು ಹಾಕಿ ಅದಕ್ಕೆ ಒಣಗಿದ ಸುವರ್ಣಗಡ್ಡೆ ತುಂಡುಗಳನ್ನು ಸೇರಿಸಿ 5-6 ನಿಮಿಷಗಳ ಕಾಲ ಕುದಿಯಲು ಬಿಡಿ. ಬಳಿಕ ನೀರನ್ನು ಸಂಪೂರ್ಣ ಹರಿಸಿಕೊಳ್ಳಿ.
* ಒಂದು ಪ್ಯಾನ್ ತೆಗೆದುಕೊಂಡು ಸುವರ್ಣಗಡ್ಡೆಯನ್ನು ಅದಕ್ಕೆ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಫ್ರೈ ಮಾಡಿ. ನಂತರ ಅದನ್ನು ತೆಗೆದು ಪಕ್ಕಕ್ಕೆ ಇರಿಸಿ.
* ಇನ್ನೊಂದು ಪ್ಯಾನ್‌ಗೆ ಜೀರಿಗೆ ಮತ್ತು ದಾಲ್ಚಿನ್ನಿ ಸೊಪ್ಪು ಹಾಕಿ ಬೆರೆಸಿ.
* ಟೊಮೆಟೋ ಪ್ಯೂರಿಯನ್ನು ಸೇರಿಸಿ, ಎಣ್ಣೆ ಬೇರ್ಪಡುವವರೆಗೆ ಬೇಯಿಸಿ.
* ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಚಿಟಿಕೆ ಒಣ ಮಾವಿನ ಪುಡಿ ಸೇರಿಸಿ ಮಿಶ್ರಣ ಮಾಡಿ.
* ಗ್ರೇವಿಗೆ ಮೊಸರು, ಗರಂ ಮಸಾಲೆ ಸೇರಿಸಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.
* ಬಳಿಕ ಹುರಿದ ಸುವರ್ಣಗಡ್ಡೆ ಸೇರಿಸಿ 10 ನಿಮಿಷ ಬೇಯಲು ಬಿಡಿ.
* ಕೊನೆಯಲ್ಲಿ ಉರಿಯನ್ನು ಆಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರ ಸುವರ್ಣಗಡ್ಡೆಯ ಗ್ರೇವಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ದೀಪಾವಳಿ ಸ್ಪೆಷಲ್- ವಾಲ್ನಟ್ ಬರ್ಫಿ ಮಾಡಿ ಹಬ್ಬವನ್ನಾಚರಿಸಿ

Share This Article