ಜಿ.ಎಂ ಸಿದ್ದೇಶ್ವರ್‌ಗೆ ಟಿಕೆಟ್ ಕೊಡಬೇಡಿ- ದೆಹಲಿಯಲ್ಲಿ ಬಂಡಾಯದ ಬಾವುಟ ಹಾರಿಸಿದ ರೆಬೆಲ್ ನಾಯಕರು

Public TV
2 Min Read

ನವದೆಹಲಿ: ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದ್ದು, ಉಡುಪಿ ಚಿಕ್ಕಮಗಳೂರು, ತುಮಕೂರು ಬೆನ್ನಲ್ಲೇ ದಾವಣಗೆರೆಯಲ್ಲೂ ಹಾಲಿ ಸಂಸದರಿಗೆ ಟಿಕೆಟ್ ನೀಡಲು ಆಕ್ಷೇಪ ಕೇಳಿ‌ ಬಂದಿದೆ. ಜಿ.ಎಂ ಜಿದ್ದೇಶ್ವರ್‌ಗೆ ಟಿಕೆಟ್ ನೀಡದಂತೆ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ನೇತೃತ್ವದ ನಿಯೋಗವೊಂದು ದೆಹಲಿಯಲ್ಲಿ ವರಿಷ್ಠರಿಗೆ ಮನವಿ ಮಾಡುತ್ತಿದೆ.

ಕಳೆದೊಂದು ವಾರದಿಂದ ದೆಹಲಿಯಲ್ಲಿ ಠಿಕಾಣಿ ಹೂಡಿರುವ ಎಂ.ಪಿ ರೇಣುಕಾಚಾರ್ಯ ನೇತೃತ್ವದ ದಾವಣಗೆರೆಯ ವಿವಿಧ ವಿಧಾನಸಭೆಗಳ ಪರಾರ್ಜಿತ ಅಭ್ಯರ್ಥಿಗಳು ರಾಜ್ಯ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ತೀವ್ರ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ (MP Renukacharya), ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಯಾವುದೇ ಕಾರಣಕ್ಕೂ ಸಿದ್ದೇಶ್ವರ್ ಗೆ ಟಿಕೆಟ್ ನೀಡಬಾರದು. ಅವರು ಜನರು ಮತ್ತು ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದ್ದಾರೆ. ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ, ವಯಸ್ಸಿನ ಕಾರಣದಿಂದಲೂ ಅವರಿಗೆ ಟಿಕೆಟ್ ನೀಡಬಾರದು ಎಂದು ಹೇಳಿದರು. ಇದನ್ನೂ ಓದಿ: ಸಂವಿಧಾನ ಬದಲಾವಣೆ ಮಾಡಿದ್ರೆ ದೇಶದಲ್ಲಿ ರಕ್ತಪಾತವಾಗುತ್ತದೆ: ಸಿಎಂ ಎಚ್ಚರಿಕೆ

ಜಿ.ಎಂ ಸಿದ್ದೇಶ್ವರ್ ಪ್ರಧಾನಿ ನರೇಂದ್ರ ಮೋದಿ (Narendra Modi) ನಾಮ‌ಬಲದಲ್ಲಿ ಗೆಲವು ಸಾಧಿಸುತ್ತಿದ್ದಾರೆ. ಮೋದಿ ಪ್ರಧಾನಿಯಾಗಬೇಕು ಎನ್ನುವ ಆಶಯಕ್ಕೆ ಜನರು ಮತ ಹಾಕುತ್ತಿದ್ದಾರೆ. ಆದರೆ ಜನಪ್ರತಿನಿಧಿಯಾಗಿ ಕ್ಷೇತ್ರದಲ್ಲಿ ಯಾವ ಅಭಿವೃದ್ದಿ ಕೆಲಸ ಮಾಡಿದರು ಎನ್ನುವುದು ಮುಖ್ಯ ಅವರು ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಅವರಿಗೆ ಬದ್ಧತೆ ಎನ್ನುವುದು ಇಲ್ಲ ಎಂದು ವಾಗ್ದಾಳಿ ನಡೆಸಿದರು.

ತಮ್ಮಗೆ ಟಿಕೆಟ್ ನೀಡದಿದ್ದರೆ ತಮ್ಮ ಕುಟುಂಬಕ್ಕೆ ಟಿಕೆಟ್ ಕೇಳುತ್ತಿದ್ದಾರೆ. ವೈದ್ಯನ ಮಗ ವೈದ್ಯನಾಗಲು ಸಾಧ್ಯವಿಲ್ಲ ಅದಕ್ಕೊಂದು ಅರ್ಹತೆ ಬೇಕು ಹಾಗೆಯೇ ಚುನಾವಣೆ ಸ್ಪರ್ಧೆ ತನ್ನದೆಯಾದ ಮಾನದಂಡಗಳಿದೆ. ಹೀಗಾಗೀ ಅವರ ಕುಟಂಬಕ್ಕೆ ಟಿಕೆಟ್ ನೀಡದೇ ಸೂಕ್ತ ಅಭ್ಯರ್ಥಿಯನ್ನು ಹುಡುಕಿ ನೀಡಬೇಕು, ನಾವು ಪಕ್ಷದ ವಿರುದ್ಧ ಬಂಡಾಯ ಸಾರುತ್ತಿಲ್ಲ ಬದಲಿಗೆ ಬೇರೆ ಅಭ್ಯರ್ಥಿಗೆ ಟಿಕೆಟ್ ಕೇಳುತ್ತಿದ್ದೇನೆ ನಮ್ಮ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದೇಶ್ವರ್ ಪ್ರತಿಬಾರಿಯೂ ಇದು ಕೊನೆ ಚುನಾವಣೆ ಎಂದು ಹೇಳುತ್ತಿದ್ದಾರೆ. ಪ್ರತಿ ಬಾರಿಯೂ ಸ್ಪರ್ಧಿಸುತ್ತಿದ್ದಾರೆ. ನಮ್ಮ ಮನವಿ ಹಾಸ್ಯಸ್ಪದವಲ್ಲ, ಜನರ ಕಾರ್ಯಕರ್ತರ ಅಭಿಪ್ರಾಯ ಹೇಳುತ್ತಿದ್ದೇವೆ. ಜೇಡ ಬಲೆ ಕಟ್ಟಿ ಕಟ್ಟಿ ಕೊನೆಗೆ ಯಶಸ್ವಿಯಾಗುತ್ತೆ ಅದೇ ರೀತಿ ನಾವು ಯಶಸ್ವಿಯಾಗುತ್ತೇವೆ. ಸೂರ್ಯಚಂದ್ರರು ಎಷ್ಟು ಸತ್ಯವೋ ಟಿಕೆಟ್ ಬದಲಾಗುವುದು ಅಷ್ಟೇ ಸತ್ಯ, ಅವರಿಗೆ ಟಿಕೆಟ್ ನೀಡಬಾರದು ಎನ್ನುವುದು ನಮ್ಮ ಒಕ್ಕೂರಲ ಮನವಿ ಎಂದರು.

Share This Article