ಕಾಂತಾರ ಸಿನಿಮಾದ ಶೂಟಿಂಗ್ ಯಾವಾಗಿಂದ ಶುರುವಾಗಲಿದೆ ಎನ್ನುವ ಕುತೂಹಲ ರಿಷಬ್ ಶೆಟ್ಟಿ (Rishabh Shetty) ಅಭಿಮಾನಿಗಳಿಗೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಕಾಂತಾರ 2 ಸಿನಿಮಾವನ್ನು ನೀವು ಈಗಾಗಲೇ ನೋಡಿದ್ದೀರಿ. ಕಾಂತಾರ 1 (Kantara) ಚಿತ್ರದ ಶೂಟಿಂಗ್ ಶುರು ಮಾಡುತ್ತಿದ್ದೇನೆ. ದಯವಿಟ್ಟು ಒಂದು ವರ್ಷ ನನ್ನ ಯಾವುದೇ ಕಾರ್ಯಕ್ರಮಕ್ಕೆ ಕರೆಯಬೇಡಿ ಎಂದು ರಿಷಬ್ ಮನವಿ ಮಾಡಿಕೊಂಡಿದ್ದಾರೆ.
ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮಾವೇಶದಲ್ಲಿ ಮಾತನಾಡಿರುವ ಅವರು, ‘ಶೂಟಿಂಗ್ ಮುಗಿದ ಮೇಲೆ ಮತ್ತೆ ಕಾರ್ಯಕ್ರಮಗಳಲ್ಲಿ ಸಿಗುತ್ತೇನೆ. ಅಲ್ಲಿಯವರೆಗೂ ಯಾವುದೇ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಬೇಡಿ. ಶೂಟಿಂಗ್ ಮಧ್ಯ ಬರಲು ಆಗುವುದಿಲ್ಲ. ಬೇಸರ ಬೇಡ ಎಂದು ಅವರು ಹೇಳಿಕೊಂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚಿತ್ರೀಕರಣಕ್ಕೆ (Shooting) ಹೋಗುವುದಾಗಿ ರಿಷಬ್ ತಿಳಿಸಿದ್ದಾರೆ. ಸ್ಕ್ರಿಪ್ಟ್ ಮತ್ತು ಪ್ರಿಪ್ರೊಡಕ್ಷನ್ ಕೆಲಸದಲ್ಲಿ ರಿಷಬ್ ಸದ್ಯ ಬ್ಯುಸಿಯಾಗಿದ್ದಾರೆ.
ಸಿನಿಮಾ ಶೂಟಿಂಗ್ ಗಾಗಿ ಈ ಬಾರಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ ರಿಷಬ್. ಕಾಂತಾರ ಸಿನಿಮಾ ಕೇವಲ ಅವರ ಊರಿನಲ್ಲಿ ಮಾತ್ರ ಚಿತ್ರೀಕರಣವಾಗಿತ್ತು. ಈ ಬಾರಿ ಅವರ ಊರಿನ ಜೊತೆಗೆ ನಾನಾ ಸ್ಥಳಗಳಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ. ಈಗಾಗಲೇ ಆ ಸ್ಥಳಗಳನ್ನು ಅವರು ನೋಡಿಕೊಂಡೂ ಬಂದಿದ್ದಾರೆ ಎನ್ನುವುದು ಸದ್ಯದ ವರ್ತಮಾನ. ಕಥೆಗೆ ತಕ್ಕಂತೆ ಬಜೆಟ್ ಖರ್ಚು ಮಾಡುವ ಕುರಿತಾಗಿಯೂ ಅವರು ಮಾತನಾಡಿದ್ದಾರೆ.
ಈ ನಡುವೆ ಕಾಂತಾರ ಸಿನಿಮಾ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (Chirotsava) ಆಯ್ಕೆಯಾಗಿದೆ. ನವೆಂಬರ್ 20 ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿರುವ ಸಿನಿಮೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿರುವ ಕಾಂತಾರ ಸಿನಿಮಾ, ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿತ್ತು. ಇದೀಗ ಸಿನಿಮೋತ್ಸವಕ್ಕೂ ಆಯ್ಕೆಯಾಗಿದೆ.
Web Stories