ಜಿಎಸ್‌ಟಿ ಸೇರಿ ಯಾವ್ದೇ ತೆರಿಗೆ ಕಡಿಮೆ ಮಾಡಿ ಅಂತ ಸರ್ಕಾರವನ್ನ ಕೇಳಬೇಡಿ: ನಿತಿನ್‌ ಗಡ್ಕರಿ

Public TV
1 Min Read

ನವದೆಹಲಿ: ಬಡವರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಹಣದ ಅಗತ್ಯವಿದೆ. ಆದ್ದರಿಂದ ಉದ್ಯಮಿಗಳು ಯಾವುದೇ ತೆರಿಗೆ (Tax) ಕಡಿಮೆ ಮಾಡಿ ಅಂತ ಸರ್ಕಾರಕ್ಕೆ ಬೇಡಿಕೆಯಿಡಬೇಡಿ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari) ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪ್ರಸ್ತುತ ಲಾಜಿಸ್ಟಿಕ್ಸ್ ವೆಚ್ಚವು ಶೇ.14-16 ಆಗಿದೆ. ಚೀನಾದಲ್ಲಿ ಲಾಜಿಸ್ಟಿಕ್ಸ್ ವೆಚ್ಚವು ಶೇ.8 ರಷ್ಟಿದೆ, ಅಮೆರಿಕ ಮತ್ತು ಯುರೋಪಿಯನ್ ದೇಶಗಳಲ್ಲಿ ಶೇ.12 ರಷ್ಟಿದೆ. ಭಾರತದಲ್ಲಿ ಮುಂದಿನ 2 ವರ್ಷಗಳಲ್ಲಿ ಲಾಜಿಸ್ಟಿಕ್ಸ್‌ ವೆಚ್ಚವು ಶೇಕಡಾ 9ಕ್ಕೆ ಇಳಿಯಲಿದೆ ಅಂತ ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

ಸರಕು ಮತ್ತು ಸೇವಾ ತೆರಿಗೆ (GST) ಮತ್ತು ಇತರ ಯಾವುದೇ ತೆರಿಗೆಗಳನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಕೇಳಬೇಡಿ. ಇದು ನಿರಂತರ ಪ್ರಕ್ರಿಯೆ ಆಗಿದೆ. ನಾವು ತೆರಿಗೆ ಕಡಿಮೆ ಮಾಡಿದ್ರೆ ನೀವು ಇನ್ನೂ ಹೆಚ್ಚಿನದ್ದನ್ನು ಕೇಳ್ತೀರಿ. ನಾವು ತೆರಿಗೆ ಕಡಿಮೆ ಮಾಡಿದ್ರೆ ಬಡವರ ಯೋಜನೆಗಳಿಗೆ ತೊಂದರೆಯಾಗುತ್ತೆ. ಯಾವುದೇ ಸರ್ಕಾರ ತೆರಿಗೆ ಇಲ್ಲದೇ ಕಲ್ಯಾಣ ರಾಜ್ಯ ನಡೆಸಲು ಸಾಧ್ಯವಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.

ಶ್ರೀಮಂತರಿಂದ ತೆರಿಗೆ ಪಡೆದು ಬಡವರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶ. ಅದಕ್ಕೆ ತಕ್ಕಂತೆ ಸರ್ಕಾರವು ತನ್ನದೇ ಆದ ಮಿತಿಗಳನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.

Share This Article