#DKShiMustResign – ಸಿಡಿ ನಿರ್ದೇಶಿಸುವುದಕ್ಕಿಂತ ಚಹಾ, ಪಕೋಡಾ ಮಾರುವುದು ವಾಸಿ

Public TV
4 Min Read

– ಕಾಂಗ್ರೆಸ್ ಸಿಡಿ ತಯಾರಿಸುವ ಕಾರ್ಖಾನೆಯಾಗಿದೆ
– ರಕ್ಷಣಾತ್ಮಕ ಆಟ ಸಾಕು, ಕೂಡಲೇ ಜಾರಕಿಹೊಳಿ ಬಂಧಿಸಿ ಎಂದ ಕಾಂಗ್ರೆಸ್

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಜೋರಾಗಿ ನಡೆದಿದ್ದು, ಡಿಕೆಶಿ ಮಸ್ಟ್ ರಿಸೈನ್ ಎಂದು ಟ್ವಿಟ್ಟರ್ ನಲ್ಲಿ ಬಿಜೆಪಿ ಅಭಿಯಾನ ಆರಂಭಿಸಿದೆ.

ಡಿಕೆಶಿ ಮಸ್ಟ್ ರಿಸೈನ್ ಹ್ಯಾಶ್ ಟ್ಯಾಗ್ ನೊಂದಿಗೆ ಬಿಜೆಪಿ ಸರಣಿ ಟ್ವೀಟ್ ಮಾಡಿ ಟಾಂಗ್ ಕೊಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಹ ತಿರುಗೇಟು ನೀಡುತ್ತಿದೆ. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ಆಡು ಮಾತನ್ನು ಕಾಂಗ್ರೆಸ್ ನಾಯಕರನ್ನು ನೋಡಿಯೇ ಮಾಡಿರಬೇಕು. ಅಧಿಕಾರಕ್ಕಾಗಿ ಯಾವ ನೀಚ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎಂದು ಮಹಾನಾಯಕ ತೋರಿಸಿಕೊಟ್ಟಿದ್ದಾರೆ. ಮಹಾನಾಯಕನಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಉಳಿದಿದ್ದರೆ, ಇದ್ದರೆ ತಕ್ಷಣ ರಾಜೀನಾಮೆ ನೀಡಲಿ ಎಂದು ಬಿಜೆಪಿ ಒತ್ತಾಯಿಸಿದೆ.

ಬಿಜೆಪಿ ಟ್ವೀಟ್‍ನಲ್ಲಿ ಏನಿದೆ?
ಭ್ರಷ್ಟಾಚಾರ ಪ್ರಕರಣದಲ್ಲಿ ಇಡಿ ಮೂಲಕ ತಿಹಾರ್ ಜೈಲಿನಲ್ಲಿ ಮುದ್ದೆ ಮುರಿದಿದ್ದ ಡಿಕೆಶಿ ಅವರನ್ನು ಸಿಡಿ ಪ್ರಕರಣದಲ್ಲೂ ತಿಹಾರ್ ಜೈಲಿಗೆ ಕಳುಹಿಸಬೇಕಿದೆ. ದ್ವೇಷ ಸಾಧಿಸಲು ರಾಜಕಾರಣದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ನಿರ್ಮಾಪಕ ಮಹಾನಾಯಕನ ಕುತಂತ್ರಕ್ಕೆ ಅಂತ್ಯ ಹಾಡಬೇಕಿದೆ. ಸಿಡಿ ಮೂವೀಸ್ ನಿರ್ದೇಶಿಸುವುದಕ್ಕಿಂತ ಚಹಾ ಅಥವಾ ಪಕೋಡಾ ಮಾರುವುದು ಉತ್ತಮ.

ಸದನದ ಸದಸ್ಯನ ಹೆಸರು ಬಂದಿದೆ ಎಂಬ ನೆಪ ಹೇಳಿ ಸದನದಲ್ಲಿ ಕಲಾಪ ನಡೆಯಲೂ ಬಿಡದ ಕಾಂಗ್ರೆಸ್ ಸದಸ್ಯರೇ ಈಗೇನು ಹೇಳುವಿರಿ. ಮಹಾನಾಯಕನ ಹೆಸರು ಪ್ರಸ್ತಾಪವಾಗಿದೆ. ವಿಶೇಷ ಅಧಿವೇಶನ ಕರೆದು ಚರ್ಚಿಸುವಷ್ಟು ವಿಚಾರಗಳಿವೆ. ಮಹಾನಾಯಕನ ರಾಜೀನಾಮೆ ಪಡೆದು ಸದನದಲ್ಲಿ ಈ ಬಗ್ಗೆ ಎಂದು ಚರ್ಚಿಸುತ್ತೀರಿ?

ಮಹಾನಾಯಕ ನಿಯಂತ್ರಿತ ಕಾಂಗ್ರೆಸ್ ಈಗ ಸಿಡಿ ತಯಾರಿಸುವ ಕಾರ್ಖಾನೆಯಂತಾಗಿದೆ. ಪ್ರಕರಣದ ಆರಂಭದಲ್ಲೇ ಮಹಾನಾಯಕ ಹಾಗೂ ಮಹಾನಾಯಕಿ ಇಬ್ಬರೂ ಹೆಗಲು ಮುಟ್ಟಿ ನೋಡಿಕೊಂಡಿದ್ದರು. ಮಹಾನಾಯಕನ ಆಟ ಬಯಲಾಗಿದೆ, ಮಹಾನಾಯಕಿಯ ಕುತಂತ್ರವೂ ಬಯಲಾಗಲಿ.

ಈ ಬಗ್ಗೆ ಶಾಸಕ ರೇಣುಕಾಚಾರ್ಯ ಸಹ ಟ್ವೀಟ್ ಮಾಡಿದ್ದು, ಲೇಡಿ + ಸಿಡಿ = ಮತ್ತೊಮ್ಮೆ ಬೇಡಿ ಎಂದು ಬರೆದಿದ್ದಾರೆ. ಒಟ್ನಲ್ಲಿ ಸಿಡಿ ವಿಚಾರದ ಕುರಿತು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಕಾಲೆಳೆಯುತ್ತಿದೆ.

ಕಾಂಗ್ರೆಸ್ ಟ್ವೀಟ್‍ನಲ್ಲಿ ಏನಿದೆ?
ದೂರು ದಾಖಲಾಗಿದೆ, ಎಫ್‍ಐಆರ್ ಹಾಕಲಾಗಿದೆ, ಇನ್ನೂ ಏಕೆ ಅತ್ಯಾಚಾರವೆಸಗಿದ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿಲ್ಲ? ಸರ್ಕಾರಕ್ಕೆ ಭಯವೇ? ಮಾಜಿ ಸಚಿವರೆಂದ ಮಾತ್ರಕ್ಕೆ ಕಾನೂನಿಗೆ ಅತೀತರೇ? ಬೊಮ್ಮಾಯಿ ಅವರೇ ಈ ರಕ್ಷಣಾತ್ಮಕ ಆಟ ಸಾಕು, ಕೂಡಲೇ ಬಂಧಿಸಿ, ರಾಜ್ಯದ ಮಾನ ಉಳಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಲಂಚ, ಮಂಚದ ಸರ್ಕಾರದಿಂದ ಈಗಾಗಲೇ ಕರ್ನಾಟಕದ ಮರ್ಯಾದೆ ದೇಶದೆದುರು ಹರಾಜಾಗಿದೆ. ದೂರು ದಾಖಲಾದರೂ, ಎಫ್‍ಐಆರ್ ಹಾಕಿದ್ದರೂ ಅತ್ಯಾಚಾರ ಮಾಡಿದ ಪ್ರಭಾವಿ ವ್ಯಕ್ತಿಯನ್ನು ರಕ್ಷಿಸಲಾಗುತ್ತಿದೆ ಎಂಬ ಕಳಂಕ ಕರ್ನಾಟಕಕ್ಕೆ ಬೇಡ, ಅದೇನಿದ್ದರೂ ಯುಪಿಯ ಯೋಗಿ ಆಡಳಿತಕ್ಕಿರಲಿ. ಸರ್ಕಾರ ಕೂಡಲೇ ಅತ್ಯಾಚಾರಿಯನ್ನು ಬಂಧಿಸಬೇಕು ಎಂದಿದೆ.

Share This Article
Leave a Comment

Leave a Reply

Your email address will not be published. Required fields are marked *