ಜನರೇ ಬಿಜೆಪಿ ಆಡಳಿತ ಮೆಚ್ಚಿದ್ದಾರೆ, ಅದ್ಕೆ ನಾವು ಜಾಸ್ತಿ ಮಾತಾಡಲ್ಲ: ಡಿ.ಕೆ ಸುರೇಶ್ ವ್ಯಂಗ್ಯ

By
2 Min Read

ಹಾಸನ: ಜನರೇ ಬಿಜೆಪಿ ಸರ್ಕಾರದ ಆಡಳಿತ ಮೆಚ್ಚಿದ್ದಾರೆ. ಆದ್ದರಿಂದ ಅದರ ಬಗ್ಗೆ ನಾವು ಜಾಸ್ತಿ ಮಾತನಾಡಲ್ಲ ಎಂದು ಪೆಟ್ರೋಲ್, ಡಿಸೇಲ್, ಗ್ಯಾಸ್ ಏರಿಕೆ ಕುರಿತು ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆ ಮುಗಿದಿದೆ. ಇದರಿಂದಾಗಿ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಸಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ತಡೆಯುವುದರಲ್ಲಿ ವಿಫಲವಾಗಿದೆ. ಜನ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿದೆ. ಚುನಾವಣೆ ಇದ್ದಿದ್ದರಿಂದ ಪೆಟ್ರೋಲ್, ಡಿಸೇಲ್, ಬೆಲೆ ಏರಿಕೆ ತಡೆದಿದ್ದರು. ಒಂದೇ ಸಾರಿ ಏರಿಕೆ ಮಾಡಿದರೆ ಜನ ಪ್ರತಿಭಟನೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಿದ್ದಾರೆ. ಇನ್ನೂ ಕೂಡ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.

ದಿ ಕಾಶ್ಮೀರ ಫೈಲ್ಸ್ ಸಿನಿಮಾ ವಿಚಾರವಾಗಿ ಮಾತನಾಡಿ, ವಿ.ಪಿ.ಸಿಂಗ್ ಇದ್ದಾಗ ಕಾಶ್ಮೀರದಲ್ಲಿ ನಡೆದಿದ್ದ ಘಟನೆಯಲ್ಲಿ ಎಲ್.ಕೆ.ಅಡ್ವಾನಿ ಅವರು ಒಂದು ಭಾಗವಾಗಿದ್ದರು. ಅವರು ಮಾಡಿದ್ದೇ ಸರಿ ಅನ್ನುವ ರೀತಿಯ ಮಾಧ್ಯಮದವರು ಹೇಳುತ್ತಿದ್ದೀರಿ. ವಿರೋಧ ಪಕ್ಷಗಳು ಇರುವುದೇ ಎಲ್ಲದಕ್ಕೂ ವಿರೋಧ ಮಾಡಲು ಎನ್ನುವ ರೀತಿ ಬಿಂಬಿಸುತ್ತಿದ್ದೀರಿ. ಅವರು ನಿಮ್ಮನ್ನು ಆಳುತ್ತಿದ್ದಾರೆ, ನಾವು ನಿಮ್ಮನ್ನು ನಂಬಿ ಬಂದಿದ್ದೀವಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಗ್ಯಾಸ್, ಡೀಸೆಲ್, ಪೆಟ್ರೋಲ್‍ಗೆ ವಿಧಿಸಲಾದ ಲಾಕ್‍ಡೌನ್‍ ತೆಗೆಯಲಾಗಿದೆ: ರಾಹುಲ್ ಗಾಂಧಿ

ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಿಂದ ರಾಜ್ಯಕ್ಕೆ ಚುನಾವಣೆಗಳು ಬದಲಾಗುತ್ತವೆ. ಕರ್ನಾಟಕ ರಾಜ್ಯದ ಚುನಾವಣೆ ಬಹಳ ದೂರವಿದೆ. ಮುಂದೆ ಗುಜರಾತ್, ಹಿಮಾಚಲಪ್ರದೇಶ ರಾಜ್ಯಗಳ ಚುನಾವಣೆ ಇದೆ. ಆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಹೋರಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‍ನ ಕೆಲ ಶಾಸಕರು ಕಾಂಗ್ರೆಸ್ ನಾಯಕರ ಭೇಟಿ ವಿಚಾರವಾಗಿ ಮಾತನಾಡಿ, ಇದುವರೆಗೂ ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರು ಯಾರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿಲ್ಲ. ಟಿಕೆಟ್‍ಗಾಗಿ ಕಾಂಗ್ರೆಸ್ ಪಕ್ಷಕ್ಕೆ ಯಾರೂ ಬರುವುದು ಬೇಡ. ಸಾಮಾನ್ಯ ಕಾರ್ಯಕರ್ತನಾಗಿ ಬಂದರೆ ಸ್ವಾಗತ ಎಂದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿ ವಿಚಾರವಾಗಿ ಮಾತನಾಡಿ, ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಏನೇ ಮಾತನಾಡಲಿ. ತಮಿಳುನಾಡಿನ ಅನುಮತಿ ಬೇಕಾಗಿಲ್ಲ. ಮುಖ್ಯಮಂತ್ರಿಗಳು ಪರಿಸರ ಇಲಾಖೆ ಅನುಮತಿ ಪಡೆದರೆ ಸಾಕು ಎಂದು ಹೇಳಿದರು. ಇದನ್ನೂ ಓದಿ: ಹಲವು ಪಾಕಿಸ್ತಾನಗಳನ್ನು ಹುಟ್ಟುಹಾಕಲು ಬಿಜೆಪಿ ಬಯಸುತ್ತಿದೆ: ಮೆಹಬೂಬಾ ಮುಫ್ತಿ

ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಬಿಜೆಪಿ ಸರ್ಕಾರವಿದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನುಕೂಲವಾಗುತ್ತೋ ಹೊರೆತು ಅನಾನೂಕೂಲ ಆಗುವುದಿಲ್ಲ. 25 ಸಂಸದರನ್ನು ರಾಜ್ಯದ ಜನ ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪರಿಸರ ಇಲಾಖೆಯ ಅನುಮತಿ ಪಡೆಯದಿದ್ದರೆ ಸಂಸದರು ಕರ್ನಾಟಕ ರಾಜ್ಯಕ್ಕೆ ಮಾಡಿದ ದೊಡ್ಡ ದ್ರೋಹವಾಗುತ್ತದೆ. ನೀರನ್ನು ಸಮುದ್ರ ಪಾಲು ಮಾಡಲು ಇವರೇ ಕಾರಣವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸೆಂಚುರಿ ಕ್ಲಬ್‍ನ್ನು ಪಾರ್ಕ್ ಜೋನ್‍ನಿಂದ ಹೊರಗಿಡಲು ಸಾಧ್ಯವಿಲ್ಲ: ಮುನಿರತ್ನ

Share This Article
Leave a Comment

Leave a Reply

Your email address will not be published. Required fields are marked *