ರಾಮನಗರ ವೇದಿಕೆಯಲ್ಲಿ ಗಲಾಟೆ, ಮಾಗಡಿಯಲ್ಲಿ ಹೊಗಳಿಕೆ : ಸುರೇಶ್‌ Vs ಅಶ್ವಥ್‌ ನಾರಾಯಣ್

Public TV
3 Min Read

ಬೆಂಗಳೂರು: ರಾಮನಗರದಲ್ಲಿ ಬೆಳಗ್ಗೆ ವೇದಿಕೆಯಲ್ಲೇ ಸಂಸದ ಡಿ.ಕೆ ಸುರೇಶ್ ಮತ್ತು ಸಚಿವ ಅಶ್ವಥ್ ನಾರಾಯಣ್ ಕಿತ್ತಾಟ ನಡೆಸಿದರೆ, ಮಾಗಡಿಯಲ್ಲಿ ಮಧ್ಯಾಹ್ನ ನಡೆದಿದ್ದೇ ಬೇರೆ. ಏನೂ ನಡೆದಿಲ್ಲ ಅನ್ನೋ ರೀತಿ ಇಬ್ಬರೂ ಒಬ್ಬರನ್ನೊಬ್ಬರು ಹೊಗಳಿಕೊಂಡರು.

ಮಾಗಡಿಯ ಚಿಕ್ಕಕಲ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣ್ ಭಾಷಣ ಮಧ್ಯೆ ಕೆಲವರು ಡಿಕೆ ಪರ ಜೈಕಾರ ಕೂಗಿದ್ರು. ಆಗ ನೀವೂ ಕೂಗ್ತಾಯಿದ್ರೆ ಕಾರ್ಯಕ್ರಮದಿಂದ ಹೊರಡೋದಾಗಿ ಡಿಕೆ ಸುರೇಶ್ ಎಚ್ಚರಿಸಿದ್ರು. ಇದರಿಂದ ಎಲ್ರೂ ಸುಮ್ಮನಾದ್ರು. ಮತ್ತೆ ಭಾಷಣ ಆರಂಭಿಸಿದ ಅಶ್ವಥ್ ನಾರಾಯಣ್, ಕ್ಷೇತ್ರದ ಜನಪ್ರಿಯ ಸಂಸದರಾದ ಡಿಕೆ ಸುರೇಶ್ ಉಪಸ್ಥಿತಿ ಗೌರವಿಸುತ್ತೇವೆ ಎಂದರು. ಈ ಮಧ್ಯೆ, ಡಿಕೆ ಸುರೇಶ್ ಭಾಷಣದ ವೇಳೆ ಜೆಡಿಎಸ್ ಕಾರ್ಯಕರ್ತರು ಡೌನ್ ಡೌನ್ ಅಂತಾ ಕೂಗಿದ್ರು. ಆಗ ಜೆಡಿಎಸ್ ಶಾಸಕರು ಎಲ್ಲರನ್ನು ಸುಮ್ಮನಾಗಿಸಲು ಪ್ರಯತ್ನಿಸಿದ್ರು. ನಂತ್ರ ಮಾತಾಡಿದ ಡಿಕೆ ಸುರೇಶ್ ಪ್ಯಾಚಪ್ ಕೆಲಸ ಮುಂದುವರೆಸಿ ಸಿಎಂ ಬಳಿ ಕ್ಷಮೆ ಕೇಳಿದ್ರು. ಅಶ್ವಥ್‍ನಾರಾಯಣ್‍ರನ್ನು ಹೊಗಳಿದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ನಡುವೆ ಜಟಾಪಟಿ

ಈ ಮೊದಲು ರಾಮನಗರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಸಿಎಂ ಬಂದಿದ್ರು. ಆದ್ರೇ, ಕಾರ್ಯಕ್ರಮದ ಆರಂಭದಿಂದಲೂ ರಾಜಕೀಯ ಮನೆ ಮಾಡಿತ್ತು. ಡಿಕೆ ಸುರೇಶ್ ಬರುವ ಮೊದಲೇ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡುವುದರಿಂದ ಶುರುವಾದ ಕಾಂಗ್ರೆಸ್-ಬಿಜೆಪಿಯ ನಾಯಕರ ರಾಜಕೀಯ ಜಟಾಪಟಿ ಹಲ್ಲೆ ಯತ್ನದವರೆಗೂ ಹೋಯ್ತು. ಇದನ್ನೂ ಓದಿ: ರಾಮನಗರ ಶಾಂತಿಯ ಜಿಲ್ಲೆ, ಗೂಂಡಾ ರೀತಿಯ ವರ್ತನೆ ಮಾಡಿದ್ದು ತಪ್ಪು: ಎಚ್‍ಡಿಕೆ ಕಿಡಿ

ಡಿಕೆ ಸುರೇಶ್‍ಗೆ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಬಳಿ ಪ್ರತಿಭಟನೆ ನಡೆಸಿದ್ರು. ಡಿಕೆ ಪರ ಘೋಷಣೆ ಕೂಗಿದ್ರು. ದಲಿತ ಸಂಘಟನೆಗಳ ಕಾರ್ಯಕರ್ತರು ವೇದಿಕೆ ಹತ್ತಿ ಕಪ್ಪುಪಟ್ಟಿ ಪ್ರದರ್ಶನ ಮಾಡಿದ್ರು. ಆಗ ಖುದ್ದು ಸಂಸದರೇ ಎಲ್ಲರನ್ನು ಸಮಾಧಾನ ಮಾಡಿ, ಕೆಳಗೆ ಇಳಿಸಿದ್ರು. ಇಷ್ಟಕ್ಕೆ ಸುಮ್ಮನಾಗಲಿಲ್ಲ. ಅಶ್ವಥ್‍ನಾರಾಯಣ್ ಭಾಷಣದ ವೇಳೆ, ನಾವು ಯಾವ ಜಮೀನಿಗೂ ಕೈ ಹಾಕಲ್ಲ. ಅಂತಾ ಪರೋಕ್ಷವಾಗಿ ಡಿಕೆ ಬ್ರದರ್ಸ್‍ಗೆ ಟಾಂಗ್ ಕೊಟ್ಟರು. ಕೇವಲ ಬಿಜೆಪಿಯಿಂದ ಮಾತ್ರ ಜಿಲ್ಲೆ ಅಭಿವೃದ್ಧಿ ಸಾಧ್ಯ ಅಂದ್ರು. ಇದನ್ನು ಆಕ್ಷೇಪಿಸಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದ್ರು. ಇದ್ರಿಂದ ಸಿಟ್ಟಿಗೆದ್ದ ಅಶ್ವಥ್‍ನಾರಾಯಣ್ ಪ್ರಚೋದನೆ ನೀಡೋ ಕೆಲಸ ಮಾಡಿದ್ರು. ಇವತ್ತು ಏನು ತಪ್ಪಾಗಿದೆ ಅಂತಾ ಘೋಷಣೆ ಕೂಗ್ತೀರಿ. ಮುಖ್ಯಮಂತ್ರಿ ಬಂದಾಗ ಜಿಲ್ಲೆಯ ಗೌರವ ಹಾಳು ಮಾಡ್ತೀರಾ..? ಯಾರಪ್ಪ ಅದು ಗಂಡು. ಇದನ್ನು ಕೆಲಸದಲ್ಲಿ ತೋರಿಸ್ರೋ ಎಂದು ಏಕವಚನದಲ್ಲಿ ಅಬ್ಬರಿಸಿದ್ರು. ಆಗ ವೇದಿಕೆಯಲ್ಲಿ ಕುಳಿತಿದ್ದ ಡಿಕೆ ಸುರೇಶ್ ಎದ್ದುಬಂದು ಭಾಷಣ ಆಕ್ಷೇಪಿಸಿದ್ರು. ವಾಗ್ವಾದ ನಡೀತು. ಆಗ ಎಂಎಲ್‍ಸಿ ರವಿ ಬಂದು ಮೈಕ್ ಕಿತ್ತುಕೊಳ್ಳಲು ನೋಡಿದ್ರು. ಅಶ್ವಥ್‍ನಾರಾಯಣ್ ಗರಂ ಆದ್ರು. ಸರ್ಕಾರ ಮಾಡ್ತಿರೋದು ಸರಿಯಲ್ಲ ಎಂದು ಡಿಕೆ ಸುರೇಶ್, ಎಂಎಲ್‍ಸಿ ರವಿ ವೇದಿಕೆಯಲ್ಲೇ ಧರಣಿ ಕುಳಿತ್ರು. ಸಿಎಂ ಬಸವರಾಜ ಬೊಮ್ಮಾಯಿ, ಶಾಸಕಿ ಅನಿತಾ ಕುಮಾರಸ್ವಾಮಿ ಎಲ್ಲವನ್ನು ನೋಡ್ತಾ ಕುಳಿತಿದ್ರು. ಪೊಲೀಸ್ರಂಂತೂ ಎಲ್ಲರನ್ನು ಸಮಾಧಾನಪಡಿಸಲು ಹರಸಾಹಸಪಟ್ರು. ಇನ್ನು, ಕಾರ್ಯಕ್ರಮ ಸ್ಥಳದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಪೊಸ್ಟರ್ ಹರಿದು, ಬಿಜೆಪಿ ಬಾವುಟ ತುಳಿದು ಡಿಕೆ ಬ್ರದರ್ಸ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆ ಬಳಿಕ ಮುಖ್ಯಮಂತ್ರಿಗಳ ಬಳಿ ಡಿ.ಕೆ. ಸುರೇಶ್ ಕ್ಷಮೆ ಕೇಳಿದ್ರು. ನಾನು ಮುಖ್ಯಮಂತ್ರಿಯವರಲ್ಲಿ ಮಾತ್ರ ಕ್ಷಮೆ ಕೇಳ್ತೀನಿ. ಇನ್ಯಾರ ಕ್ಷಮೆಯೂ ಕೇಳಲ್ಲ ಅಂದ್ರು. ನಾನ್ಯಾವ ಗೂಂಡಾಗಿರಿಯೂ ಮಾಡಿಲ್ಲ. ಆದ್ರೇ, ಸಚಿವರು ಸವಾಲು ಹಾಕಿ ಕರೆದಾಗ ನಾನು ಸುಮ್ಮನೆ ಕೂರಲೂ ಆಗಲ್ಲ ಅಂತಾ ಸ್ಪಷ್ಟನೆ ನೀಡಿದ್ರು. ಅಷ್ಟಕ್ಕೂ ಇದು ಬಿಜೆಪಿ ಕಾರ್ಯಕ್ರಮ ಅಲ್ಲ. ಸರ್ಕಾರದ ಕಾರ್ಯಕ್ರಮ. ಮಂತ್ರಿಗಳು ಮಂತ್ರಿಗಳ ರೀತಿ ನಡೆದುಕೊಂಡಿಲ್ಲ. ರಾಮನಗರ ಜಿಲ್ಲೆಗೆ ಅವಮಾನ ಆಗಬಾರದು ಅಂತಾ ಮಾತಾಡಿದ್ದೀನಿ ಎಂದು ಘಟನೆಯನ್ನು ಡಿಕೆ ಸುರೇಶ್ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ದಲಿತ ಸಂಘಟನೆಗಳಿಗೆ ಆಹ್ವಾನ ನೀಡದೇ ಕಾರ್ಯಕ್ರಮ ಮಾಡಿದ್ದಕ್ಕೆ ಪ್ರತಿಭಟನೆ: ಡಿಕೆ ಸುರೇಶ್

ಅಶ್ವಥ್ ನಾರಾಯಣ್ ಮಾತಾಡಿ, ಘಟನೆಯಿಂದ ನೋವಾಗಿದೆ. ಗೂಂಡಾ ವರ್ತನೆ ಖಂಡನೀಯ ಅಂದ್ರು. ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು. ವಿಷಯ ದೊಡ್ಡದು ಮಾಡೋ ವ್ಯಕ್ತಿಯಲ್ಲ. ಜನರೇ ನಿರ್ಧರಿಸ್ತಾರೆ. ನಂಗೇನು ಬೇಸರವಿಲ್ಲ ಆಗಿದ್ದೆಲ್ಲಾ ಮರೆಯೋಣ. ಎನ್ನುತ್ತಲೇ ಈ ಕಾರ್ಯಕ್ರಮವನ್ನು ನಾನು ಎಂದಿಗೂ ಮರೆಯಲ್ಲ ಅಂತಾ ಸಿಎಂ ಬೊಮ್ಮಾಯಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *