ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ: ಡಿಕೆಶಿ

Public TV
3 Min Read

– ಸಂಸದೆ ಸುಮಲತಾಗೆ ಟಾಂಗ್

ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಕ್ಷೇತ್ರಕ್ಕೆ ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಅವರು ತಮ್ಮ ಅಭ್ಯರ್ಥಿಯನ್ನು ಪರಿಚಯಿಸಿದ್ದಾರೆ.

ಮಂಡ್ಯದ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಭಾಷಣದ ಆರಂಭದಲ್ಲೇ ಸ್ಟಾರ್ ಚಂದ್ರು ಅವರನ್ನು ಪರಿಚಯ ಮಾಡಿಕೊಟ್ಟರು. ಯಾರು ಅಂತಾ ನಿಮಗೆಲ್ಲ ಗೊತ್ತಲ್ವಾ?. ಸ್ಟಾರ್ ಚಂದ್ರು ಅವರು ಅಂತಾ ಪರಿಚಯಿಸಿದರು. ಈ ಮೂಲಕ ಸ್ಟಾರ್ ಚಂದ್ರು (Star Chandru) ಅವರನ್ನ ಮಂಡ್ಯದ ಗಂಡು ಎಂದು ಡಿಕೆಶಿ ಬಣ್ಣಿಸಿದರು. ಡಿಕೆಶಿ ಪರಿಚಯಿಸ್ತಿದ್ದಂತೆ ಸ್ಟಾರ್ ಚಂದ್ರು ಅವರು ಎದ್ದು ನಿಂತು ಕೈ ಮುಗಿದು ನಮಸ್ಕರಿಸಿದರು.

ತೆನೆ ಬಿಸಾಕಿ ಕಮಲ ತಬ್ಬಿದ ಕುಮಾರಣ್ಣ: ನಾನು, ಸಿದ್ದರಾಮಯ್ಯ ನಿಮ್ಮಿಂದ ಜೈಕಾರ, ಹೂ ಹಾರ ಹಾಕಿಸಿಕೊಳ್ಳಲು ಬಂದಿಲ್ಲ. 5 ಗ್ಯಾರಂಟಿ ಅನುಷ್ಠಾನಕ್ಕೆ ಕಾರಣಕರ್ತರಾದ ನಿಮಗೆ ಧನ್ಯವಾದ ಹೇಳಲು ಬಂದಿದ್ದೇವೆ. ದೇವರು ವರವನ್ನು ಕೊಡಲ್ಲ, ಶಾಪವನ್ನು ಕೊಡಲ್ಲ ಅವಕಾಶ ಮಾತ್ರ ಕೊಡುತ್ತಾನೆ. ನೀವು ಕೊಟ್ಟ ಅವಕಾಶದಿಂದ ದೇಶಕ್ಕೆ ಮಾದರಿ ಆಡಳಿತ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದಿದ್ದೆ. 5 ಗ್ಯಾರಂಟಿ ನೋಡಿ ಅರಳಿದ ಕಮಲ ಮುದುಡಿತು. ಕುಮಾರಣ್ಣ ತೆನೆ ಬಿಸಾಕಿ ಕಮಲ ತಬ್ಬಿದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪ್ರತಾಪ್ ಸಿಂಹ 10 ವರ್ಷದಲ್ಲಿ ಉತ್ತಮವಾದ ಕೆಲಸ ಮಾಡಿದ್ದಾರೆ, ಟಿಕೆಟ್ ಸಿಗುವ ವಿಶ್ವಾಸವಿದೆ: ಜಿಟಿಡಿ

ಕೃಷ್ಣನ‌ ತಂತ್ರ ಇದ್ರೆ ಯಶಸ್ಸು: ತಾಯಂದಿರ ಮೊಗದಲ್ಲಿ ನಗು ಕಾಣುತ್ತಿದೆ. ಗ್ಯಾರಂಟಿ ಯೋಜನೆಗಳು ಬಳಕೆ ಆಗುತ್ತಿವೆ. ಫ್ರೀಯಾಗಿ ಬಸ್‌ನಲ್ಲಿ ಓಡಾಡುತ್ತಿದ್ದೀರಾ?. ಇದೇ ವೇಳೆ 2000 ಸಾವಿರ ಬರ್ತಿದೆಯಾ ಎಂದು ಕೇಳಿದರು. ನಿಮ್ಮ‌ ಹೆಂಡತಿಯರಿಗೂ 2000 ಬರ್ತಿದೆ ಅಲ್ವಾ ಕೈ ಎತ್ತಿ ಎಂದು ಹಾಸ್ಯ ಚಟಾಕಿ ಹಾರಿಸಿದ ಡಿಕೆ, ಇಂತಹ ಕಾರ್ಯಕ್ರಮ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ ಅಲ್ಲ. ಗ್ಯಾರಂಟಿ ಯೋಜನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನುಡಿದಂತೆ ನಡೆದದ್ದು ಕಾಂಗ್ರೆಸ್ ಸರ್ಕಾರ. ಧರ್ಮರಾಯ ಧರ್ಮತ್ವ, ಕರ್ಣನ ದಾನ, ಅರ್ಜುನ ಗುರಿ, ಕೃಷ್ಣನ‌ ತಂತ್ರ ಇದ್ರೆ ಯಶಸ್ಸು ಎಂದು ಹೇಳಿದರು.

ರೈತರೇ ಆತ್ಮಸಾಕ್ಷಿ ಮುಟ್ಟಿ ಹೇಳಿ: ಇವತ್ತಿಗೆ ಕೆಪಿಸಿಸಿ ಅಧ್ಯಕ್ಷನಾಗಿ 4 ವರ್ಷ ತುಂಬಿದೆ. ಖಾಲಿ ಇದ್ದ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಹೇಳಿ. ಕೆರೆ ತುಂಬಿಸಲು, ನಾಲೆ ಅಭಿವೃದ್ಧಿಗೆ 2000 ಕೋಟಿ ಮಂಜೂರು. KRS ಪ್ರವಾಸಿ ಕೇಂದ್ರ ಮಾಡಲು ತೀರ್ಮಾನ. ರೈತರ ಬದುಕು, ನೀರಿಗಾಗಿ ಮೇಕೆದಾಟು ಯೋಜನೆ. ಮೇಕೆದಾಟು ಅನುಷ್ಠಾನ ಆದರೆ ಕಷ್ಟಕಾಲದಲ್ಲಿ ಸಹಕಾರಿ. ಬಿಜೆಪಿ, ಜೆಡಿಎಸ್‌ ಸರ್ಕಾರ ಇದ್ದಾಗ ಇದ್ಯಾವುದನ್ನು ಮಾಡಲಿಲ್ಲ. ರೈತರಿದ್ದೀರಾ ನಿಮ್ಮ ಬೆಳೆಗಳನ್ನು ಉಳಿಸಿದ್ದೇವೆ, ಆತ್ಮಸಾಕ್ಷಿ ಮುಟ್ಟಿ ಹೇಳಿ ಎಂದರು.

ಅಂಬರೀಶ್‌ ಹೆಸರಲ್ಲಿ ರಸ್ತೆ: ಇವತ್ತು ನಂಟಸ್ಥನ ಮಾಡಿಕೊಂಡು ಓಡಾಡುವ ಜೆಡಿಎಸ್‌-ಬಿಜೆಪಿ (JDS- BJP) ಏನು ಮಾಡಿದ್ದಾರೆ. ದೇವೇಗೌಡರು ಇವತ್ತು ಅಯ್ಯಯ್ಯೋ ಎಂದು ಕಣ್ಣೀರು ಹಾಕುತ್ತಿದ್ದಾರೆ. ನಿಮ್ಮ ಕಣ್ಣೀರು ನಿಮ್ಮ‌ ಮನೆಗೆ ಹೊರತು ರಾಜ್ಯಕ್ಕಲ್ಲ ದೇವೇಗೌಡರೇ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರನ್ನು ಉಳಿಸಲು ಗ್ಯಾರಂಟಿ ಯೋಜನೆ. ನಿಮ್ಮ‌ ಋಣ ತೀರಿಸಿದ ಸಮಾಧಾನ ನಮಗಿದೆ. ಅಂಬರೀಶ್ ನಮ್ಮ ಪಕ್ಷದಲ್ಲಿ ಮಂತ್ರಿಯಾಗಿದ್ದರು. ಅಂಬರೀಶ್ (Ambareesh) ಅವರ ಹೆಸರಲ್ಲಿ ರಸ್ತೆ ಮಾಡುತ್ತೇವೆ. ಪ್ರಾಣ ಬಿಡುವಾಗ ಕಾಂಗ್ರೆಸ್ಸಿಗರಾಗಿ ಬಿಟ್ರು. ಇದೆಲ್ಲಾ ನಿಮ್ಮ ತಲೇಲಿ ಇರಲಿ. ಅಂಬರೀಶ್ ಸ್ನೇಹಿತರನ್ನೇ ಅಭ್ಯರ್ಥಿ ಮಾಡಿದ್ದೇವೆ. ಸೂರ್ಯ ಚಂದ್ರರಷ್ಟೇ ಸ್ಟಾರ್ ಗೆಲುವು ಸತ್ಯ. ನಿಜತಾನೇ ಅಮ್ಮಾ, ಅಕ್ಕಾ ಎಂದು ಡಿಕೆಶಿ ಮತಯಾಚಿಸುವ ಮೂಲಕ ಸಂಸದೆ‌ ಸುಮಲತಾಗೆ ಡಿಸಿಎಂ‌ ಡಿಕೆಶಿ ಟಾಂಗ್ ಕೊಟ್ಟರು.

Share This Article