– ನಮ್ಮ ಗ್ಯಾರಂಟಿಗಳನ್ನು ನಕಲು ಮಾಡಿ ಬಿಜೆಪಿ ಬೇರೆ ರಾಜ್ಯಗಳಲ್ಲಿ ಗೆಲ್ಲುತ್ತಿದೆ
ಬೆಳಗಾವಿ: ಭದ್ರಾ ಮೇಲ್ದಂಡೆ ಯೋಜನೆ ಅನುದಾನ, ನರೇಗಾ, ಜಲ ಜೀವನ್ ಮಿಷನ್ ಬಾಕಿ ಅನುದಾನ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ದಿವಾಳಿಯಾಗಿದೆ ಎನ್ನಲು ಸಾಧ್ಯವೇ? ಎಂದು ಪ್ರಶ್ನಿಸುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ವಿರೋಧ ಪಕ್ಷಗಳಿಗೆ ಚಾಟಿ ಬೀಸಿದರು.
ವಿಧಾನಸಭೆಯ ಕಲಾಪದಲ್ಲಿ ಗೃಹಲಕ್ಷ್ಮಿ ಹಣ ಬಾಕಿ ವಿಚಾರವಾಗಿ ನಡೆದ ಚರ್ಚೆ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಲು ಸಾಧ್ಯವಾಗದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಒಪ್ಪಿಕೊಳ್ಳಿ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಮಾಡಿದ ಟೀಕೆಗೆ ಶಿವಕುಮಾರ್ ತಿರುಗೇಟು ನೀಡಿದರು.ಇದನ್ನೂ ಓದಿ: ಖರ್ಗೆಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು: ತಿಪ್ಪಣ್ಣಪ್ಪ ಕಮಕನೂರು
ಜನಪ್ರತಿನಿಧಿಯಾಗಿ ಟೆಂಗಿನಕಾಯಿ ಅವರು ತಮ್ಮ ಕ್ಷೇತ್ರದ ಜನರ ಅಭಿಪ್ರಾಯದ ಆಧಾರದ ಮೇಲೆ ಇಲ್ಲಿ ಪ್ರಶ್ನೆ ಕೇಳಿದ್ದಾರೆ. ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದಾಗಲೂ ನಾನು ಇದ್ದೆ. ಅವರು ಕಂತುಗಳ ಆಧಾರದ ಮೇಲೆ ಹಣ ಪಾವತಿಯಾಗಿರುವುದರ ಬಗ್ಗೆ ಉತ್ತರ ನೀಡಿದ್ದಾರೆ. ಸೆಪ್ಟೆಂಬರ್ ತಿಂಗಳವರೆಗೆ ಬಿಡುಗಡೆಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಈ ಮಧ್ಯೆ 2 ತಿಂಗಳು ಬಂದಿಲ್ಲ ಎಂಬುದರ ಬಗ್ಗೆ ಪ್ರಶ್ನೆ ಎತ್ತಿದ್ದು, ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದಾರೆ ಎಂದರು.
ಈ ಮಧ್ಯೆ ಬಿಜೆಪಿ ಶಾಸಕ ಸುನೀಲ್ ಅವರು ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಒಪ್ಪಿಕೊಳ್ಳಿ ಎನ್ನುತ್ತಿದ್ದಾರೆ. ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರದಲ್ಲಿ ನಿರ್ಮಲಾ ಸೀತರಾಮನ್ ಅವರು ಬಜೆಟ್ ಮಂಡಿಸಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಿಸಿದರು. ಅದರ ಆಧಾರದ ಮೇಲೆ ಸಿಎಂ ಆಗಿದ್ದ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲೂ ಹಣ ಘೋಷಿಸಿದರು. ಇದುವರೆಗೂ ಆ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಇನ್ನು ನರೇಗಾ ಯೋಜನೆ ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಸಾವಿರಾರು ಕೋಟಿ ಹಣ ನೀಡುವುದು ಬಾಕಿ ಇದೆ. ಹಾಗೆಂದು ಕೇಂದ್ರ ಸರ್ಕಾರ ದಿವಾಳಿಯಾಗಿದೆ ಎಂದು ನಾವು ಹೇಳಲು ಆಗುವುದಿಲ್ಲ ಎಂದು ಹರಿಹಾಯ್ದರು.
ನಮ್ಮ ಗ್ಯಾರಂಟಿಗಳನ್ನು ನಕಲು ಮಾಡಿ ಬಿಜೆಪಿ ಬೇರೆ ರಾಜ್ಯಗಳಲ್ಲಿ ಗೆಲ್ಲುತ್ತಿದೆ:
ನಮ್ಮ ಗ್ಯಾರಂಟಿ ಯೋಜನೆ ವಿಚಾರದಲ್ಲಿ ಯಡಿಯೂರಪ್ಪ ಅವರು ಒಂದು ಕಾಳು ಕಡಿಮೆಯಾದರೂ ನಾವು ಒಪ್ಪುವುದಿಲ್ಲ ಎಂದು ಹೇಳಿದ್ದರು. ನಾವು ಈ ಯೋಜನೆ ಘೋಷಣೆ ಮಾಡಿದ್ದು, ನಾವು ಅದಕ್ಕೆ ಬದ್ಧವಾಗಿದ್ದೇವೆ. ನಮ್ಮ ಯೋಜನೆಗಳನ್ನು ನಕಲು ಮಾಡಿಯೇ ಎನ್‌ಡಿಎ ಇಡೀ ದೇಶದಲ್ಲಿ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆದ್ದು ಅಧಿಕಾರ ಪಡೆಯುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಇಲ್ಲವಾಗಿದ್ದರೆ, ನೀವು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್- ಪೋಷಕರ ಹೇಳಿಕೆ ದಾಖಲು, ವಕೀಲರಿಂದ ಪ್ರಶ್ನೆಗಳ ಸುರಿಮಳೆ

