ಎಚ್‍ಡಿಕೆ ಸಿಎಂ ಆಗಿದ್ದಾಗ ಒಂದು ತಪ್ಪು ಮಾಡಿಬಿಟ್ರು: ಡಿಕೆಶಿ

Public TV
2 Min Read

ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಒಂದು ತಪ್ಪು ಮಾಡಿಬಿಟ್ಟರು. ಅದು ರಾಮನಗರ ಜಿಲ್ಲೆ ಮಾಡಿದ್ದು ತಪ್ಪಲ್ಲ, ಜಿಲ್ಲೆಗೆ ರಾಮನಗರ ಎಂದು ಹೆಸರಿಟ್ಟಿದ್ದು ತಪ್ಪು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಜಿಲ್ಲೆಯ ದ್ಯಾವರಸೇಗೌಡನದೊಡ್ಡಿ ರಸ್ತೆಯಲ್ಲಿ ನಡೆದ ಒಕ್ಕಲಿಗ ಸಂಘದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿಯಾಗಿ ಮಾತನಾಡಿದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ರಾಮನಗರ ಜಿಲ್ಲೆಗೆ ಬೇಕಾದ ಸವಲತ್ತುಗಳನ್ನೇಲ್ಲಾ ನೀಡಿದ್ದರು. ಡಿಸಿ ಕಚೇರಿ, ಎಸ್‍ಪಿ ಕಚೇರಿ, ರಾಜೀವ್ ಗಾಂಧಿ ವಿವಿ ಸೇರಿದಂತೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದರು. ಆದರೆ ಹೆಸರು ಬೇಕಲ್ವಾ, ನಾವು ಬೆಂಗಳೂರಿನವರು ರಾಮನಗರ ಜಿಲ್ಲೆ ಅಂತಾ ಹೆಸರಿಡುವ ಬದಲು ಬೆಂಗಳೂರು ದಕ್ಷಿಣ ಎಂದು ಹೆಸರಿಡಬೇಕಿತ್ತು. ಈ ವಿಚಾರವಾಗಿ ಎಚ್‍ಡಿಕೆಯವರ ಬಳಿ ಪ್ರಸ್ತಾಪಿಸಿದ್ದೆ ಅವರು ಏನೋ ಆಗಿ ಬಿಡ್ತು ಬಿಡಣ್ಣಾ ಎಂದರು. ಆದರೆ ಬೆಂಗಳೂರು ದಕ್ಷಿಣ ಎಂದರೆ ನಮ್ಮ ಆಸ್ತಿಯ ಮೌಲ್ಯಗಳೆಲ್ಲಾ ಹೆಚ್ಚುತ್ತಿದ್ದವು ಎಂದು ಡಿಕೆಶಿ ತಿಳಿಸಿದರು.

ಕರ್ನಾಟಕ ಎಂದಾಕ್ಷಣ 5 “ಕೆ” ಗಳನ್ನು ನೆನೆಯಲೇ ಬೇಕು ಎಂದು ಈ ಹಿಂದೆಯೇ ಹೇಳಿದ್ದೇನೆ. ಅದು ಬೆಂಗಳೂರು ಕಟ್ಟಿದ್ದ ಕೆಂಪೇಗೌಡ್ರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ವಿಶ್ವಮಾನವತೆ ಸಾರಿದ ಕುವೆಂಪು, ವಿಕಾಸಸೌಧ ಕಟ್ಟಿದ ಎಸ್.ಎಂ.ಕೃಷ್ಣ ಹಾಗೂ ಸುವರ್ಣಸೌಧ ಕಟ್ಟಿದ ಕುಮಾರಸ್ವಾಮಿ ಎಂದು ತಿಳಿಸಿದರು. ಕೆಂಗಲ್ ಹನುಮಂತಯ್ಯನವರು ಬೆಂಗಳೂರನ್ನು ರಾಜ್ಯಧಾನಿ ಮಾಡದಿದ್ದರೇ ಒಕ್ಕಲಿಗರ ಪರಿಸ್ಥಿತಿ ಏನು ಆಗುತ್ತಿತ್ತು, ದಾವಣಗೆರೆ, ಹುಬ್ಬಳಿ ರಾಜ್ಯಧಾನಿ ಆಗಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿಕೊಳ್ಳುವಂತೆ ಡಿಕೆಶಿ ಹೇಳಿದರು.

ನಾನು ಕಷ್ಟ ಕಾಲದಲ್ಲಿದ್ದಾಗ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಾಗ ನಮಗೆ ಬೆಂಬಲ ನೀಡಿದ್ದೀರಿ. ಚಾರ್ಜ್ ಶೀಟ್ ಆಗದೇ ಹೊರಗೆ ಬಂದಿದ್ದೇನೆ ಎಂದರೆ ನಿಮ್ಮೆಲ್ಲರ ಪ್ರಾರ್ಥನೆಯೇ ಕಾರಣ. ಆ ಕಾಯ್ದೆ ಎಷ್ಟು ಕಠಿಣವಾಗಿದೆ ಎಂಬುದು ನನಗೆ ಗೊತ್ತಿದೆ. ಜೈಲಿಗೆ ಹೋಗಿ ಬಂದಿದ್ದಕ್ಕೆ ಬೇಸರವಿಲ್ಲ, ತಪ್ಪು ಮಾಡಿದರೆ ದೇವರು ನನಗೆ ಶಿಕ್ಷೆ ನೀಡಲಿ. ನಾನು ವ್ಯವಹಾರ ಮಾಡಿದ್ದೇನೆ ಹೊರತು ಬೇರೇನನ್ನೂ ಮಾಡಿಲ್ಲ. ನಾನು ಏನೇ ಮಾಡಿದರು ಒಕ್ಕಲಿಗ ಅಂತಾರೇ, ಒಕ್ಕಲಿಗ ಎಂದೇ ಮಂತ್ರಿಸ್ಥಾನ ಮತ್ತೊಂದು ನೀಡುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *