ಬೆಂಗಳೂರು: ಸಿಎಂ ಹೇಳಿದ್ಮೇಲೆ ಇನ್ನೇನಿದೆ? ಅವ್ರು ಹೇಗೆ ಹೇಳುತ್ತಾರೋ ಹಾಗೆ ನಡೆಯುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (Siddaramaiah) ಹೇಳಿದ್ದಾರೆ.
ದೆಹಲಿಯಿಂದ ಮರಳಿದ ಡಿಕೆಶಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಹೈಕಮಾಂಡ್ ಒಪ್ಪಿದರೇ ನಾನೇ ಪೂರ್ಣಾವಧಿ ಸಿಎಂ ಆಗಿರುತ್ತೇನೆ ಎಂಬ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆ ಬಗ್ಗೆ ಕೇಳಿದಾಗ ಉತ್ತರಿಸಿದ ಅವರು, ಸಿಎಂ ಹೇಳಿದ ಮೇಲೆ ಮುಗಿಯಿತು. ಅವರು ಹೇಳಿದ ಮೇಲೆ ಇನ್ನೇನಿದೆ? ಅವರು ಹೇಗೆ ಹೇಳುತ್ತಾರೋ ಹಾಗೆ ನಾವು ಕೇಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: 5 ವರ್ಷವೂ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಮಾತು ಮೊದಲ ಬಾರಿಗೆ ಬದಲಾಯ್ತು!
ಇನ್ನು ದೆಹಲಿ ಭೇಟಿ ಬಗ್ಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯೆಯಾದ ಅಂಬಿಕಾ ಸೋನಿಯವರ ಮನೆಗೆ ಭೇಟಿ ನೀಡಿದ್ದೆ. ಅವರ ಪತಿ ತೀರಿಕೊಂಡಿದ್ದರು. ಹೀಗಾಗಿ ಸಂತಾಪ ಸೂಚಿಸಲು ಅವರ ಮನೆಗೆ ಭೇಟಿ ನೀಡಿದ್ದೆ. ನಾನು ತಿಹಾರ್ ಜೈಲಿನಲ್ಲಿದ್ದಾಗ ಅವರು ಸೋನಿಯಗಾಂಧಿ ಅವರ ಜೊತೆ ಬಂದು ನನ್ನನ್ನು ಭೇಟಿ ಮಾಡಿದ್ದರು. ನನಗೂ ಅವರಿಗೂ ಬಹಳ ಆತ್ಮೀಯತೆ. ನಮ್ಮ ಪಕ್ಷದ ನಾಯಕರು ಅವರು. ಎಸ್.ಎಂ.ಕೃಷ್ಣ ಅವರು ಅಧಿಕಾರದಲ್ಲಿದ್ದಾಗ ನಮಗೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನನ್ನನ್ನು ತಮ್ಮನಂತೆ ಕಂಡಿದ್ದರು. ನನ್ನ ಕೆಲಸಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹಾಗಾಗಿ ನಾನು ಅವರ ಮನೆಗೆ ಭೇಟಿ ನೀಡಿದ್ದೆ ಎಂದು ತಿಳಿಸಿದ್ದಾರೆ.
ನೀವು ಹೈಕಮಾಂಡ್ ಭೇಟಿಗೆ ದೆಹಲಿಗೆ ಹೋಗಿದ್ದಿರಿ ಎಂದು ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದೆಹಲಿಗೆ ಹೋಗಿದ್ದ ವಿಷಯ, ಕೆಲಸದ ಬಗ್ಗೆ ಮಾತ್ರ ಹೇಳಬಲ್ಲೆ. ಹೈಕಮಾಂಡ್ ಭೇಟಿ ಬಗ್ಗೆ ನೀವು ಮಾಧ್ಯಮದವರು, ಸಾರ್ವಜನಿಕರು, ಇನ್ನೂ ಬೇರೆಯವರು ಏನು ಬೇಕಾದರೂ ಚರ್ಚೆ ಮಾಡಿಕೊಳ್ಳಿ. ಯಾರು ಬೇಕಾದರೂ ಮಾತಾಡಿಕೊಳ್ಳಲಿ. ನನಗದು ಸಂಬಂಧ ಪಡದ ವಿಷಯ ಎಂದಿದ್ದಾರೆ.
