ರಾಜಕೀಯದಲ್ಲಿ ಕೇಸ್ ಯಾರ ಮೇಲಿಲ್ಲ? – ಕೆಪಿಸಿಸಿಗೆ ಅಡ್ಡಗಾಲು ಹಾಕಿದವರಿಗೆ ಡಿಕೆ ಡಿಚ್ಚಿ

Public TV
2 Min Read

ನವದೆಹಲಿ: ರಾಜಕೀಯದಲ್ಲಿ ಕೇಸ್‍ಗಳು ಕಾಮನ್. ಕೇಸ್ ಯಾರ ಮೇಲೆ ಇಲ್ಲ ಹೇಳಿ, ಕೆಲವೊಮ್ಮೆ ರಾಜಕೀಯದಲ್ಲಿ ಉದ್ದೇಶ ಪೂರ್ವಕವಾಗಿ ಕೇಸ್ ಹಾಕಲಾಗುತ್ತೆ. ಬಂಗಾರಪ್ಪ ಸಿಎಂ ಆದ ಕಾಲದಿಂದ ಕುಮಾರಸ್ವಾಮಿ ಸರ್ಕಾರದವರೆಗೂ ನನ್ನ ಮೇಲೆ ಯಾವುದಾದರೂ ತನಿಖೆ ಆಗಿದೆಯಾ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಹೆಸರು ಕೇಳಿ ಬಂದ ಬೆನ್ನಲ್ಲೇ ಇಡಿ ಕೇಸ್ ಇರುವ ಕಾರಣ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ತಕರಾರು ತೆಗೆದಿದ್ದರು ಎನ್ನಲಾಗಿತ್ತು. ಈ ವಿಚಾರವಾಗಿ ನವದೆಹಲಿಯಲ್ಲಿ ಮಾತನಾಡಿದ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಡಿ ಕೇಸ್ ಮಾನದಂಡವಲ್ಲ ರಾಜಕೀಯದಲ್ಲಿ ಕೇಸ್ ಇಲ್ಲದವರಿಲ್ಲ. ಕೇಸ್ ಇರುವವರ ಪಟ್ಟಿ ನೀಡಬೇಕಾ ಎನ್ನುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ತಾವು ಸಮರ್ಥ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

ಇಡಿ ಅಧಿಕಾರಿಗಳಿಗೆ ಕೆಲವು ದಾಖಲೆಗಳನ್ನು ನೀಡಬೇಕಿತ್ತು, ಕೋರ್ಟ್ ಕೆಲಸ ಇತ್ತು ಹೀಗಾಗಿ ದೆಹಲಿಗೆ ಬಂದಿದ್ದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನಾನು ಕೇಳಿಲ್ಲ, ಲಾಬಿಯೂ ಮಾಡಿಲ್ಲ, ಯಾರ ಭೇಟಿಯೂ ಮಾಡಿಲ್ಲ, ನಾನು ಸ್ಪರ್ಧೆಯಲ್ಲೇ ಇಲ್ಲ ಎಂದ ಮೇಲೆ ಬೇಸರ ಹತಾಶೆ ಆಗುವ ಮಾತೇ ಇಲ್ಲ ಎಂದರು.

ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಯಾರ ಸಹವಾಸಕ್ಕೂ ಹೋಗಿಲ್ಲ, ಯಾವ ಹೇಳಿಕೆಗೂ ನಾನು ಜವಾಬ್ದಾರಿಯಲ್ಲ, ಇದ್ದ ಎಲ್ಲ ಆರೋಪಗಳು ಮುಕ್ತವಾಗಿದ್ದೇನೆ. ಯಾವ ಭ್ರಷ್ಟಾಚಾರ ಒತ್ತುವರಿ ಕೇಸ್ ನನ್ನ ಮೇಲೆ ಇಲ್ಲ. ನನ್ನ ಬಗ್ಗೆ ಪಕ್ಷದಲ್ಲಿ ಯಾರೂ ಮಾತನಾಡಲ್ಲ. ಮಾತನಾಡಿದ ರಿಪೊರ್ಟ್ ಇದ್ದರೆ ಕೊಡಿ ಎಂದು ಸವಾಲು ಹಾಕಿದರು.

ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ ಆಗಿಲ್ಲ, ಅವರು ಕೆಲಸ ಮಾಡುತ್ತಿದ್ದಾರೆ ಈಗ ಇರುವವರೇ ಸಮರ್ಥರಿದ್ದಾರೆ ಎಂದು ಪರೋಕ್ಷವಾಗಿ ದಿನೇಶ್ ಗುಂಡೂರಾವ್‍ಗೆ ವ್ಯಂಗ್ಯ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆ ನಡೆಯಲ್ಲ. ನಾನು ಗುಂಪು ಕಟ್ಟಿಲ್ಲ, ಕಟ್ಟೊದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ನಾನು ದೇವರು ಧರ್ಮವನ್ನು ನಂಬುತ್ತೇನೆ. ಕೆಲವು ಕಾರ್ಯಕರ್ತರು ಹರಕೆ ಹೊತ್ತಿದ್ದರು ಅದನ್ನು ತೀರಿಸುವ ಜವಾಬ್ದಾರಿ ಇತ್ತು. ಹೀಗಾಗಿ ಮಧ್ಯಪ್ರದೇಶ ಗ್ವಾಲಿಯರ್ ಬಳಿ ಇರುವ ದೇವಸ್ಥಾನಕ್ಕೆ ತೆರಳಿದ್ದೆ. ಅಲ್ಲಿ ಹರಕೆ ತೀರಿಸಿ ಬಂದಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *