– ಗೋವಾ ಮುಖ್ಯಮಂತ್ರಿ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ
– ಪ್ರಧಾನಿ ಮೋದಿ, ಜಲಮಂತ್ರಿಗಳೊಂದಿಗೆ ಚರ್ಚೆ ಮಾಡ್ತೀನಿ ಎಂದ ಡಿಸಿಎಂ
ಬೆಂಗಳೂರು: ಗೋವಾ ಸಿಎಂ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡು ಮಹದಾಯಿ (Mahadayi) ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಅಂತ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗೋವಾ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹದಾಯಿಗೆ ಕೇಂದ್ರ ಸರ್ಕಾರ ಅನುಮತಿ ಕೊಡಲ್ಲ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ (Pramod Sawant) ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗೋವಾ ಸಿಎಂ ಹೇಳಿಕೆಯನ್ನ ನಾನು ಖಂಡಿಸುತ್ತೇನೆ. ಗೋವಾ ಸಿಎಂ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ಗೋವಾ ಸಿಎಂಗೆ ಫೆಡರಲ್ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ. ಈಗಾಗಲೇ ಮಹದಾಯಿ ಯೋಜನೆ ಬಗ್ಗೆ ಅವಾರ್ಡ್ ತೀರ್ಮಾ ಆಗಿದೆ. ಟೆಂಡರ್ ಕೂಡ ಕರೆಯಲಾಗಿದೆ. ಕೆಲಸ ಶುರು ಮಾಡಬೇಕು. ಇದರ ಮಧ್ಯೆ ಅರಣ್ಯ ಇಲಾಖೆ ಏನೋ ನೊಟೀಸ್ ಕೊಟ್ಟಿದೆ. ನಾವು ಅದಕ್ಕೆ ಎಲ್ಲಾ ಉತ್ತರ ಕೊಡ್ತೀವಿ. ಮಹದಾಯಿ ವಿಷಯದಲ್ಲಿ ನಮ್ ಕೆಲಸ ನಾವು ಪ್ರಾರಂಭ ಮಾಡ್ತೀವಿ ಅಂತ ಸ್ಪಷ್ಟನೆ ನೀಡಿದರು.
ಇದು ನಮ್ಮ ರಾಜ್ಯದ ಸಂಸದರ ಸ್ವಾಭಿಮಾನದ ಪ್ರಶ್ನೆ. ಈವರೆಗೂ ಸಂಸದರು ಬಾಯಿ ಮುಚ್ಚಿಕೊಂಡಿರೋದೇ ತಪ್ಪು. ಒಂದು ಎಂಪಿ ಸೀಟಿಗೋಸ್ಕರ ನಾವು ನಮ್ಮನ್ನ ಮಾರಿಕೊಳ್ಳೋಕೆ ಸಾಧ್ಯವಿಲ್ಲ. 28 ಸಂಸದರು, 12 ಜನ ರಾಜ್ಯಸಭೆ ಸದಸ್ಯರು ಈ ಬಗ್ಗೆ ಮಾತಾಡಬೇಕು. ನಾನು ದೆಹಲಿಗೆ ಹೋಗಿ ಸಂಸದರ ಜೊತೆ ಮಾತಾಡ್ತೀನಿ. ಪ್ರಧಾನಿ, ಜಲಶಕ್ತಿ ಮಂತ್ರಿಗಳಿಗೂ ಸಮಯ ಕೇಳ್ತೀನಿ. ಇದರ ಬಗ್ಗೆ ಚರ್ಚೆ ಮಾಡ್ತೀನಿ ಅಂತ ತಿಳಿಸಿದರು.
ಮಹದಾಯಿ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಮತ್ತು ಅರಣ್ಯ ಸಚಿವರು ರಾಜಕೀಯ ಮಾಡ್ತಿಲ್ಲ. ಅವರು ಸಹ ಅಭಿವೃದ್ಧಿ ಆಗಬೇಕು ಅಂತ ಹೇಳಿದ್ದಾರೆ. ಗೋವಾ ಇದರಲ್ಲಿ ರಾಜಕೀಯ ಮಾಡ್ತಿದೆ. ನಾವು ಮಹದಾಯಿ ಕೆಲಸ ಪ್ರಾರಂಭ ಮಾಡೋಕೆ ಏನು ಬೇಕೋ ಅದನ್ನ ಮಾಡ್ತೀವಿ ಅಂತ ಗೋವಾ ಸಿಎಂ ವಿರುದ್ಧ ಡಿಕೆಶಿವಕುಮಾರ್ ವಾಗ್ದಾಳಿ ನಡೆಸಿದರು.